ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಐ ವಿಶ್ ಹಿಮ್ ಆಲ್ ದಿ ಬೆಸ್ಟ್, ಗುಡ್ ಲಕ್ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಭ ಹಾರೈಸಿದ್ದಾರೆ.
ನಗರದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ನಾನೇ ಪೂರ್ಣಾವಧಿ ಸಿಎಂ ಆಗುವ ವಿಶ್ವಾಸ ಇದೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಗೆ ಒಳ್ಳೆಯದಗಾಲಿ. ಗುಡ್ ಲಕ್. ಐ ವಿಶ್ ಹಿಮ್ ಆಲ್ ದಿ ಬೆಸ್ಟ್. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ.ಗೊಂದಲ ಇರುವುದು ನಿಮ್ಮಲ್ಲಿ ಎಂದು ಡಿಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಸಮಜಾಯಿಷಿ ನೀಡಿದರು.
ಸಿದ್ದರಾಮಯ್ಯ ಅವರು ಅತಿ ಹೆಚ್ಚಿನ ದಿನ ಸಿಎಂ ಆಗಿ ಆಡಳಿತ ಮಾಡುವ ಮೂಲಕ ದಾಖಲೆ ನಿರ್ಮಿಸುತ್ತಿರುವ ಕುರಿತು ಮಾತನಾಡಿದ ಡಿಸಿಎಂ, ಅವರಿಗೆ ಯಶಸ್ಸು ಸಿಗಲಿ. ಭಗವಂತ ಒಳ್ಳೆಯದು ಮಾಡಲಿ. ಹೆಚ್ಚಿನ ಆರೋಗ್ಯ ಸಿಗಲಿ. ಹೆಚ್ಚಿಗೆ ಜನರ ಸೇವೆ ಮಾಡುವ ಅವಕಾಶ ಸಿಗಲಿ ಎಂದು ಶುಭ ಕೋರಿದರು. ಕುಮಾರಸ್ವಾಮಿ ಜೇಬಲ್ಲೇ ಐಟಿ ಇಲಾಖೆ ಇದೆಯಲ್ಲಾ?:
ಮೃತ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ ನೀಡಿದ ಪರಿಹಾರ 25 ಲಕ್ಷದ ಮೂಲ ಕಾಂಗ್ರೆಸ್ ಪಕ್ಷದ್ದೋ, ಸರ್ಕಾರದಿಂದಲೋ?, ಐಟಿ ಇಲಾಖೆ ಏನು ಮಾಡುತ್ತಿದೆ ಎನ್ನುವ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಐಟಿ ಸೇರಿದಂತೆ ಇತರ ಎಲ್ಲಾ ಇಲಾಖೆಗಳು ವಿರೋಧ ಪಕ್ಷಗಳ ಹತ್ತಿರವೇ ಇದೆಯಲ್ಲವೇ?, ಕುಮಾರಸ್ವಾಮಿ ಜೇಬಲ್ಲೇ ಇದ್ದಾವಲ್ಲ? ಎಂದು ವ್ಯಂಗ್ಯವಾಡಿದ ಅವರು ಪರಿಹಾರ ಹಣದ ಬಗ್ಗೆ ಸಚಿವ ಜಮೀರ್ ಅವರ ಬಳಿ ಮಾತನಾಡುತ್ತೇನೆ ಎಂದು ಉತ್ತರಿಸಿದರು.
ಬಳ್ಳಾರಿ ಭೇಟಿ ಉದ್ದೇಶ ಏನೆಂದು ಕೇಳಿದಾಗ, “ಬಳ್ಳಾರಿ ಸೇರಿದಂತೆ ರಾಜ್ಯದ ಎಲ್ಲ ಭಾಗದಲ್ಲಿ ಶಾಂತಿಯುತ ವಾತಾವರಣ ಉಳಿಯಬೇಕು. ಬಿಜೆಪಿಯವರು ಹತಾಶರಾಗಿ ಎಲ್ಲಾ ಕಡೆ ಇಂತಹ ಪ್ರಯತ್ನ ನಡೆಸುತ್ತಿದ್ದಾರೆ. ಅಲ್ಲಿ ಹೋಗಿ ಪರಿಸ್ಥಿತಿ ಅವಲೋಕನ ಮಾಡುತ್ತೇನೆ ಎಂದು ಡಿಸಿಎಂ ತಿಳಿಸಿದರು.
ಸೋನಿಯಾ ಗಾಂಧಿ ಶೀಘ್ರ ಗುಣಮುಖರಾಗಲಿ:
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಸೋನಿಯಾಗಾಂಧಿ ಅವರು ಶೀಘ್ರ ಗುಣಮುಖರಾಗಲಿದೆ ಎಂದು ಆರೈಸಿದರು.
ಸೋನಿಯಾ ಗಾಂಧಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವುದರ ಬಗ್ಗೆ ಅಧಿಕೃತ ಮಾಹಿತಿಯಿಲ್ಲ ಹಾಗೂ ಅನಾರೋಗ್ಯದ ಕಾರಣಕ್ಕೂ ಮಾಹಿತಿ ಇಲ್ಲ. ನನಗೂ ಇದರ ಬಗ್ಗೆ ಮಾಹಿತಿ ನೀಡಿದರು. ಅವರು ಶೀಘ್ರ ಗುಣಮುಖರಾಗಲಿ ಎಂದು ನಾವೆಲ್ಲರೂ ಪ್ರಾರ್ಥಿಸುತ್ತೇವೆ. ದೀರ್ಘಕಾಲ ಆರೋಗ್ಯಯುತವಾಗಿರಲಿ. ಅವರ ಅಮೂಲ್ಯ ಸಲಹೆಗಳು ಈ ದೇಶ ಹಾಗೂ ಪಕ್ಷಕ್ಕೆ ಬೇಕಾಗಿದೆ. ಪಕ್ಷ ಸಂಕಷ್ಟದಲ್ಲಿದ್ದ ಹೊತ್ತಿನಲ್ಲಿ ಅತ್ಯಮೂಲ್ಯ ಸಲಹೆ ನೀಡಿದವರು ಅವರು ಎಂದು ಹೇಳಿದರು.
ದಾಖಲೆ ಮುರಿಯಲು ರಾಜಕೀಯ ಮಾಡಿಲ್ಲ:
ಮೈಸೂರಿನಲ್ಲಿ ಸಿದ್ದರಾಮಯ್ಯ ಮಾತನಾಡಿ, ದಾಖಲೆ ಮುರಿಯಲೆಂದು ರಾಜಕೀಯ ಮಾಡಿಲ್ಲ. ಈ ದಾಖಲೆ ಕಾಕತಾಳೀಯ. ದೇವರಾಜ ಅರಸು ಅವರು ಎಷ್ಟು ವರ್ಷ ಆಡಳಿತ ಮಾಡಿದ್ದಾರೆಂದು ತಿಳಿದಿರಲಿಲ್ಲ. ಜನರ ಆಶೀರ್ವಾದದಿಂದ ದೇವರಾಜ ಅರಸು ಅವರ ದಾಖಲೆ ಮುರಿಯಲು ಸಾಧ್ಯವಾಗಿದೆ ಎಂದರು.
ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಈ ಕುರಿತು ಪಕ್ಷದ ವರಿಷ್ಠರು ತೀರ್ಮಾನಿಸಬೇಕಿದೆ. ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸುವ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

