ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಿಧಾನಗತಿಯ ಮಕ್ಕಳಿಗೆ ವಿಶೇಷ ಗಮನಹರಿಸುವ ಮೂಲಕ ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮಗೊಳಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ ಹೇಳಿದರು.
ನಗರದ ಮಹಾರಾಣಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಿದ ಸಮಾಜ ವಿಜ್ಞಾನ ವಿಷಯ ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನಿಧಾನ ಕಲಿಕಾ ಮಕ್ಕಳಿಗೆ “ಗುರಿ 40+” ಕ್ರಿಯಾಯೋಜನೆ ತಯಾರು ಮಾಡಿಕೊಂಡು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ನೀಲನಕ್ಷೆ ಹಾಗೂ ನಾಲ್ಕು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆಗೊಳಿಸಿದ್ದು, ಆ ಮಕ್ಕಳಿಗೆ ವಿಶೇಷ ಗಮನಹರಿಸಿ ರಾಜ್ಯ ಟಾಪ್ 10ರಲ್ಲಿ ಜಿಲ್ಲೆಯ ಫಲಿತಾಂಶವನ್ನು ತರಲು ಎಲ್ಲ ಪ್ರೌಢಶಾಲಾ ಸಹ ಶಿಕ್ಷಕರು ಕ್ರಮವಹಿಸಬೇಕು ಎಂದರು.
ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕ ನಿತ್ಯಾನಂದ ಪ್ರಾಸ್ತಾವಿಕವಾಗಿ ಮಾತನಾಡಿ, ಶೈಕ್ಷಣಿಕ ವರ್ಷ ಪ್ರಾರಂಭದಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಹಾಗೂ ಪಾಠ ಆಧಾರಿತ ಘಟಕ ಪರೀಕ್ಷೆಯನ್ನು ನಡೆಸುತ್ತಿದ್ದು, ಮಕ್ಕಳ ಕಲಿಕಾ ಮಟ್ಟ ಉತ್ತಮವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ, ಚಿತ್ರದುರ್ಗ ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ತಾಲ್ಲೂಕು ಅಧ್ಯಕ್ಷ ಬಸವರಾಜ್, ತಾಲ್ಲೂಕು ಸಮಾಜ ವಿಜ್ಞಾನ ಅಧ್ಯಕ್ಷ ಎಂ.ಆರ್.ನಾಗರಾಜ್, ಸಂಪನ್ಮೂಲ ವ್ಯಕ್ತಿಗಳಾದ ಪ್ರಭುಪ್ರಸಾದ್, ಶ್ರೀನಿವಾಸ್ ಇದ್ದರು.

