ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಜಾತಶತ್ರು, ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ರಾಜಕಾರಣದ ಧ್ರುವತಾರೆ, ಎಲ್ಲರನ್ನೂ ಆತ್ಮೀಯವಾಗಿ ಕಾಣುತ್ತಿದ್ದ ಅವರ ಸಜ್ಜನಿಕೆಯ ಮೇರು ವ್ಯಕ್ತಿತ್ವ, ಎಲ್ಲಾ ಪೀಳಿಗೆಗೂ ಮಾದರಿ, ಇವರ ನಿಧನ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಬೆಂಗಳೂರಿನ ಸದಾಶಿವನಗರದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿವಾಸದಲ್ಲಿ ಅಗಲಿದ ನಾಯಕನ ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ನಂತರ ಅವರು ಮಾತನಾಡಿದರು.
ಬೆಂಗಳೂರನ್ನು ಸಿಂಗಾಪುರದಂತೆ ಸಿಲಿಕಾನ್ ಸಿಟಿಯಾಗಿ ಬದಲಾವಣೆ ಮಾಡುವ ಮೂಲಕ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದರು. ಜೊತೆಗೆ ರೈತರಿಗೆ ಶ್ರೀಗಂಧ ಬೆಳೆಯಲು ಅವಕಾಶ ಮಾಡಿಕೊಟ್ಟ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣರವರು ಹಲವಾರು ಜನಪರ ಯೋಜನೆಗಳ ಮೂಲಕ ಜನರ ಮನಗೆದ್ದ ರಾಜಕಾರಣಿ.
ಅವರ ನಿಧನದಿಂದ ನಾಡು ಒಬ್ಬ ಧೀಮಂತ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸೇರಿದಂತೆ ಅನೇಕ ರಾಜಕೀಯ ಗಣ್ಯರು ಉಪಸ್ಥಿತರಿದ್ದರು.