ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರದಲ್ಲಿ ಸತತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಾಬು ಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಬೃಹತ್ ಕಟ್ಟಡ ಕುಸಿದಿರುವ ಪ್ರಕರಣದಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಮಂಗಳವಾರ ಮಧ್ಯಾಹ್ನ 3:40ರ ಸುಮಾರಿಗೆ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಟ್ಟಡ ಕುಸಿತ ಸಂಭವಿಸಿತ್ತು. ದುರಂತ ನಡೆದ ಸಂದರ್ಭದಲ್ಲಿ ಬಿಹಾರ, ಆಂಧ್ರಪ್ರದೇಶದ ಚಿತ್ತೂರು ಮತ್ತು ಕರ್ನಾಟಕದ ಯಾದಗಿರಿಯ ಒಟ್ಟು 21 ಕಾರ್ಮಿಕರು ಇದ್ದರು ಎನ್ನಲಾಗಿದೆ.
ಮಂಗಳವಾರ ಮೂವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದನ್ನು ಸ್ಮರಿಸಬಹುದಾಗಿದೆ. ಬುಧವಾರದ ಕಾರ್ಯಾಚರಣೆಯಲ್ಲಿ ಮತ್ತೆ 7 ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದು, ಆ ಮೂಲಕ ಸಾವಿನ ಸಂಖ್ಯೆ 8ಕ್ಕೇರಿದೆ.
ಮೃತ ಐವರನ್ನು ಹರ್ಮನ್ (26), ತ್ರಿಪಾಲ್ (35), ಮೊಹಮ್ಮದ್ ಸಾಹಿಲ್ (19), ಸತ್ಯರಾಜು (25) ಮತ್ತು ಶಂಕರ್ ಎಂದು ಗುರುತಿಸಲಾಗಿದೆ. ಒಟ್ಟು 13 ಜನರನ್ನು ರಕ್ಷಿಸಲಾಗಿದ್ದು, ಆರು ಮಂದಿ ಬೆಂಗಳೂರು ಉತ್ತರ ಮತ್ತು ಹೊಸ್ಮಾಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವಶೇಷಗಳಡಿಯಲ್ಲಿ ಸಿಕ್ಕಿಬಿದ್ದಿರುವ ಕಾರ್ಮಿಕರನ್ನು ರಕ್ಷಿಸಲು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್ ಮತ್ತು ಅಗ್ನಿಶಾಮಕ ತುರ್ತು ಸೇವಾ ಸಿಬ್ಬಂದಿಗಳು ನಿರಂತರ ಕಾರ್ಯಾಚರಣೆ ನಡೆಸಿದ್ದಾರೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಯನ್ನು ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಮುಂದುವರೆಸಿದ್ದಾರೆ.
ಇಬ್ಬರ ಬಂಧನ-
ಬೃಹತ್ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಾದ ಕಟ್ಟಡದ ಮಾಲೀಕ ಮತ್ತು ಕಟ್ಟಡ ನಿರ್ಮಾಣದ ಉಸ್ತುವಾರಿ ಕಂಟ್ರಾಕ್ಟರ್ ಸೇರಿದ್ದಾರೆ ಎನ್ನಲಾಗಿದೆ. ಬಿಎನ್‌ಎಸ್, ಬಿಬಿಎಂಪಿ ಆರ್‌ಇಆರ್‌ಎ ಆ್ಯಕ್ಟ್ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಾರ್ಮಿಕ ಮೊಹಮ್ಮದ್ ಹರ್ಷದ್ ನೀಡಿರೋ ದೂರಿನ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಬಂಧಿತ ಆರೋಪಿಗಳಾದ ಕಟ್ಟಡದ ಮಾಲೀಕ ಭುವನ್ ರೆಡ್ಡಿ, ಗುತ್ತಿಗೆದಾರ ಮುನಿಯಪ್ಪ ಎಂದು ಗುರುತಿಸಲಾಗಿದೆ. ಈ ನಿರ್ಮಾಣ ಹಂತದ ಕಟ್ಟಡ ಭುವನ್ ರೆಡ್ಡಿ ಹೆಸರಿನಲ್ಲಿದ್ದು ಈತ ಪ್ರಕರಣದ ಮೊದಲನೇ ಆರೋಪಿಯಾಗಿದೆ. ಬಂಧಿತ ಮಾಲೀಕ ಮುನಿರಾಜ ರೆಡ್ಡಿಯ ಮಗ ಎನ್ನಲಾಗಿದೆ.
ಆರೋಪಿಗಳ ವಿರುದ್ಧ ಬಿಎನ್‌ಎಸ್ , ಬಿಬಿಎಂಪಿ, ಆರ್‌ಇಆರ್‌ಎ ಆ್ಯಕ್ಟ್ ಹಾಗೂ ರೇರಾ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಬಿಎನ್ಎಸ್ 105, 125(A) 125(B), 270,3(5) ಬಿಬಿಎಂಪಿ ಆ್ಯಕ್ಟ್ 326, 327,328 RERA (u/s3) ಅಡ್ಡಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
4 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಮಾತ್ರ ಬಿಬಿಎಂಪಿ ಅಧಿಕಾರಿಗಳು ಪರವಾನಗಿ ನೀಡಿದ್ದರು. ಆದರೆ ಗುತ್ತಿಗೆದಾರ ಮುನಿಯಪ್ಪ ಏಳು ಮಹಡಿಗಳನ್ನು ನಿರ್ಮಾಣ ಮಾಡಿದ್ದ ಎಂದು ಅಧಿಕಾರಿ ತಿಳಿಸಿದರು.