ರಾಜ್ಯ 2ನೇ ರಾಜಧಾನಿಯಾಗಿ ಚಿತ್ರದುರ್ಗ ಅಥವಾ ದಾವಣಗೆರೆ ಘೋಷಿಸಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಮೊದಲು ಮೈಸೂರು ರಾಜ್ಯವಾಗಿತ್ತು. ನಂತರದಲ್ಲಿ ಕರ್ನಾಟಕ ಎಂದು ನಾಮಕರಣವಾಯಿತು. ಹೆಸರಾಯಿತು ಕರ್ನಾಟಕ ಆದರೆ ಉಸಿರಾಗಲಿಲ್ಲ. ಬದುಕಿಗೆ ಉಸಿರು ಎಷ್ಟು ಮುಖ್ಯವೋ ಹಾಗೆಯೇ ಮನುಷ್ಯನ ಬದುಕಿಗೆ ಕನ್ನಡ ಉಸಿರಾಗಬೇಕು ಎಂದು ಡಾ. ಬಸವಪ್ರಭು ಸ್ವಾಮಿಗಳು ಕರೆ ನೀಡಿದರು.

ಶ್ರೀಮುರುಘರಾಜೇಂದ್ರ ಮಠದಲ್ಲಿ ಬುಧವಾರ ನಡೆದ ೩೪ನೇ ವರ್ಷದ ಸಾಮೂಹಿಕ ಕಲ್ಯಾಣ ಮಹೋತ್ಸವದ ನೇತೃತ್ವ ವಹಿಸಿ, ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ತಾಯಿ ಭುವನೇಶ್ವರಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಶ್ರೀಗಳುಇಂದು ಬೆಂಗಳೂರು ಎಲ್ಲ ಕ್ಷೇತ್ರದಲ್ಲಿ ಮುಂದೆ ಬಂದಿದೆ.

ಆದರೆ ಕನ್ನಡಿಗರಿಗೆ ಅಲ್ಲಿ ಉದ್ಯೋಗ ಸಿಗುತ್ತಿಲ್ಲ. ಕನ್ನಡಿಗರಿಗೆ ಉದ್ಯೋಗ ಕೊಡಿ ಎಂದು ಒತ್ತಾಯಿಸುವ ಸ್ಥಿತಿ ಬಂದಿದೆ. ಕರ್ನಾಟಕದ ಎರಡನೇ ರಾಜಧಾನಿಯಾಗಿ ಚಿತ್ರದುರ್ಗ ಅಥವಾ ದಾವಣಗೆರೆಯನ್ನು ಘೋಷಣೆ ಮಾಡಿದರೆ ಕನ್ನಡ ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎಂದರು.

ರಾಜ್ಯವನ್ನಾಳುವ ನಾಯಕರು ಕನ್ನಡವನ್ನು ಉಳಿಸುವ ಪ್ರಯತ್ನ ಮಾಡಬೇಕು. ನಮಗೆ ದೂರದೃಷ್ಟಿ ಮುಖ್ಯ. ನಮ್ಮ ಭಾಷೆಯನ್ನು ಪ್ರೀತಿಸಬೇಕು. ಕನ್ನಡ ಉಸಿರಾಗಬೇಕು. ಕನ್ನಡದ ಕವಿಗಳು, ವಚನಕಾರರ ಸಾಹಿತ್ಯವನ್ನು ಓದಿದರೆ ಜ್ಞಾನೋದಯವಾಗುತ್ತದೆ. ಜ್ಞಾನವನ್ನು ಸಂಪಾದಿಸಬೇಕು.

ವಿಶ್ವಕ್ಕೆ ದೊಡ್ಡ ಕೊಡುಗೆ ವಚನ ಸಾಹಿತ್ಯ. ನಾಣ್ಯದ ಎರಡು ಮುಖಗಳಂತೆ ದಂಪತಿಗಳು ಒಂದಾಗಿರಬೇಕು. ಮನಸ್ಸುಗಳು ಒಂದಾಗಬೇಕು. ಅಹಂಕಾರದಿಂದ ಎಷ್ಟೋ ದಾಂಪತ್ಯ ವಿಚ್ಛೇದನವಾಗುತ್ತಿವೆ. ಪ್ರತಿಷ್ಠೆಗಳನ್ನು ಬದಿಗಿಡಬೇಕು. ಪರಸ್ಪರ ಪ್ರೀತಿ ವಾತ್ಸಲ್ಯದಿಂದ ಜೀವನ ಸಾಗಿಸಬೇಕೆಂದರು.

ಮುಖ್ಯಅತಿಥಿ ಡಾ.ಅಶ್ವಿನಿಕುಮಾರ್ ಪಸಾರದ ಮಾತನಾಡಿ, ಸಮಾಜದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಚಿಕ್ಕ ಸಮಸ್ಯೆ ಇದ್ದರೂ ಉದಾಸೀನ ಮಾಡಬಾರದು. ಹಾಗೆಯೇ ಮುಂದೆ ಅದು ದೊಡ್ಡ ಸಮಸ್ಯೆಯಾಗಿಯೇ ಉಳಿಯಬಹುದು ಎಂದರು.

ಡಾ.ಮಲ್ಲಪ್ಪ ಮಾತನಾಡಿ, ಜ್ಞಾನ ಮತ್ತು ಭಾಷೆಗೂ ವ್ಯತ್ಯಾಸ ಇದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಪ್ರಯತ್ನವಾಗಬೇಕು. ಕನ್ನಡ ಭಾಷೆ ಅನ್ನದ ಭಾಷೆಯಾಗಬೇಕು. ಹೃದಯದ ಭಾಷೆಯಾಗಬೇಕು. ಅತ್ಯಂತ ಪ್ರಾಚೀನ ಇತಿಹಾಸ ಹೊಂದಿರುವ ಭಾಷೆ ನಮ್ಮದು. ನಮಗೆ ಭಾಷೆಗಳ ಕೀಳರಿಮೆಗಳು ತೊಲಗಬೇಕು. ಪ್ರತಿಯೊಂದು ಭಾಷೆಗೂ ತನ್ನದೇ ಆದ ಮಹತ್ವವಿದೆ. ಅನೇಕ ಕವಿಗಳು ಕನ್ನಡ ನಾಡು ನುಡಿ ಸಾಂಸ್ಕೃತಿಕ ಶ್ರೀಮಂತಿಕೆ ಬಗ್ಗೆ ಬರೆದಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿ.ಸಿ.ಪಾಣಿ, ಪ್ರಪಂಚದಲ್ಲಿ ಲಕ್ಷಾಂತರ ಪ್ರಾಣಿಗಳಿವೆ. ಆದರೆ ಮನುಷ್ಯ ವಿಶಿಷ್ಟ ಪ್ರಾಣಿ. ಪ್ರಪಂಚದಲ್ಲಿ ಅನೇಕ ಭಾಷೆಗಳಿವೆ. ನಮ್ಮಲ್ಲಿ ಸಂಸ್ಕೃತ ಭಾಷೆ ಪ್ರಾಚೀನವಾದುದು. ನಂತರ ಹಿಂದಿ, ಬಂಗಾಳಿ, ಕನ್ನಡ, ತಮಿಳು ಮೊದಲಾದವುಗಳು. ಕನ್ನಡಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ ಎಂದರು.

ಕಾರ್ಯಕ್ರಮದಲ್ಲಿ ೫ ಜೋಡಿಗಳ ವಿವಾಹ ನೆರವೇರಿತು. ೨೦೨೪ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು. ಶ್ರೀ ಬಸವನಾಗಿದೇವ ಸ್ವಾಮಿಗಳು ಇದ್ದರು.

ಗಂಜಿಗಟ್ಟಿ ಕೃಷ್ಣಮೂರ್ತಿ ಜಾನಪದ ಗೀತೆ ಹಾಡಿದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಹಾಡಿದರು. ಜ್ಞಾನಮೂರ್ತಿ ಸ್ವಾಗತಿಸಿದರು. ನವೀನ್ ಮಸ್ಕಲ್ ನಿರೂಪಿಸಿದರು.

 

 

- Advertisement -  - Advertisement - 
Share This Article
error: Content is protected !!
";