ಶಿವಕುಮಾರ ಸ್ವಾಮೀಜಿ ಅವರ ಜಯಂತಿ ಆಚರಣೆಗೆ ಆಗಮಿಸಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರಿನ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ
118ನೇ ಜಯಂತಿ ಹಿನ್ನೆಲೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು ಇಂದು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಗದ್ದುಗೆ ದರ್ಶನ ಪಡೆದರು.

ಸಿದ್ದಗಂಗಾ ಮಠದಲ್ಲಿ ಲಕ್ಷಾಂತರ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿ ಬದುಕಿನ ದಾರಿ ತೋರಿಸಿಕೊಟ್ಟ ನಡೆದಾಡುವ ದೇವರು ಶ್ರೀ ಶಿವಕುಮಾರಸ್ವಾಮೀಜಿ ಅವರ ಜಯಂತಿ ಅಂಗವಾಗಿ ಮಠದಲ್ಲಿ ಗುರುವಂದನಾ ಮಹೋತ್ಸವ ಸೇರಿದಂತೆ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕೇಂದ್ರ ಸಚಿವ ರಾಜನಾಥ್​ ಸಿಂಗ್​ ಅವರು ಈ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಮಠಕ್ಕೆ ಭೇಟಿ ನೀಡಿದ ಅವರು, ಶಿವಕುಮಾರ ಸ್ವಾಮೀಜಿಗಳ ಗದ್ದುಗೆಯ ದರ್ಶನ ಪಡೆದರು.
ರಾಜನಾಥ್​ ಸಿಂಗ್​ ಅವರ ಜೊತೆಗೆ ತುಮಕೂರು ಕ್ಷೇತ್ರದ ಸಂಸದ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಶ್ರೀಗಳ ಗದ್ದುಗೆ ದರ್ಶನ ಪಡೆದು ಗಮನ ಸೆಳೆದರು.

ರುದ್ರಾಕ್ಷಿ ಮಂಟಪದ ಮೆರವಣಿಗೆ:
ಶಿವಕುಮಾರ ಸ್ವಾಮೀಜಿಯವರ ಜನ್ಮದಿನೋತ್ಸವದ ಅಂಗವಾಗಿ ಮಠದಲ್ಲಿ ರುದ್ರಾಕ್ಷಿ ಮಂಟಪದ ಮೆರವಣಿಗೆ ನಡೆಯಿತು. ಶಿವಕುಮಾರ ಸ್ವಾಮೀಜಿಯವರ ಪುತ್ಥಳಿಯನ್ನು ಮಂಟಪದಲ್ಲಿ ಇರಿಸಿ
, ಮೆರವಣಿಗೆಗೆ ಶ್ರೀ ಸಿದ್ದಲಿಂಗಸ್ವಾಮೀಜಿ ಚಾಲನೆ ನೀಡಿದರು. ಅವರಿಗೆ ಹಲವು ಮಠಾಧೀಶರು, ರಾಜಕಾರಣಿಗಳು ಸಾಥ್ ನೀಡಿದರು.
ರುದ್ರಾಕ್ಷಿ ಮಂಟಪದ ಮುಂಭಾಗದಲ್ಲಿ ನಂದಿಧ್ವಜ
, ಪೂರ್ಣಕುಂಭ, ಲಿಂಗದವೀರರು, ಬ್ಯಾಂಡ್ ಸೆಟ್ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗಿಯಾದವು. ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿರು.

ಸಿದ್ಧಗಂಗಾ ಮಠದಲ್ಲಿ ಓದಿದಂತಹ ಅದೆಷ್ಟೋ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ, ಸಮಾಜದಲ್ಲಿ ಸುಸಂಸ್ಕೃತ ಹಾಗೂ ಉತ್ತಮ ಜೀವನವನ್ನು ಸಾಗಿಸುತ್ತಿದ್ದಾರೆ. ಲಕ್ಷಾಂತರ ಮಂದಿಗೆ ಸುಸಂಸ್ಕೃತ ಜೀವನವನ್ನು ಒದಗಿಸಿಕೊಟ್ಟ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ. ಪದ್ಮಭೂಷಣ, ಕರ್ನಾಟಕ ರತ್ನ, ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ 118ನೇ ಜಯಂತಿ ಇಂದು.

ಸಿದ್ಧಗಂಗಾ ವಿದ್ಯಾಸಂಸ್ಥೆಯ ಮೂಲಕ ಬಡವ, ಶ್ರೀಮಂತ, ಜಾತಿ, ಧರ್ಮ ಯಾವುದೇ ಭೇದಭಾವ ಮಾಡದೇ ಎಲ್ಲ ಮಕ್ಕಳಿಗೂ ಸಮಾನವಾಗಿ ಶಿಕ್ಷಣ ಧಾರೆ ಎರದವರು ಶ್ರೀಗಳು. ನಡೆದಾಡುವ ದೇವರೆಂದೇ ಹೆಸರಾಗಿರುವ ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಜಗತ್ತು ಕಂಡ ಅಚ್ಚರಿ ಎಂದರೂ ತಪ್ಪಲ್ಲ.

ಶ್ರೀ 118ನೇ ಜಯಂತಿ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನಾಡಿನ ಅನೇಕ ಗಣ್ಯರು, ಇಲ್ಲಿನ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆದವರೆಲ್ಲರೂ, ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಗಳನ್ನು ಸ್ಮರಿಸಿ ನಮನ ಸಲ್ಲಿಸಿದ್ದಾರೆ.

 

Share This Article
error: Content is protected !!
";