ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಜಾಪ್ರಭುತ್ವದ ರಕ್ಷಣೆಯೇ ನಮ್ಮೆಲ್ಲರ ಹೊಣೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ಆರ್.ರಾಮಲಿಂಗಾರೆಡ್ಡಿ ಹೇಳಿದರು.
ಬಿಟಿಎಂ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಡಿವಾಳ ಟೋಟಲ್ ಮಾಲ್ ಬಳಿ ಆಯೋಜಿಸಲಾಗಿದ್ದ ‘ಮತಗಳ್ಳತನ ವಿರುದ್ಧದ ಜಾಗೃತಿ ಅಭಿಯಾನ‘ದಲ್ಲಿ ಭಾಗವಹಿಸಿ ಅವರು ಸ್ಥಳೀಯ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದರು. ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಮತದಾನ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸಚಿವರು ತಿಳಿಸಿದರು.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ದೇಶದಾದ್ಯಂತ ಮತದಾರರ ಪಟ್ಟಿಗಳಲ್ಲಿ ವ್ಯವಸ್ಥಿತವಾಗಿ ಹಸ್ತಕ್ಷೇಪ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಅರ್ಹ ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಿ, ನಕಲಿ ಮತದಾರರನ್ನು ಸೇರಿಸುವ ಮೂಲಕ ತಮ್ಮ ರಾಜಕೀಯ ಲಾಭಕ್ಕಾಗಿ ಚುನಾವಣೆಯನ್ನು ಗೆಲ್ಲಲು ಪ್ರಯತ್ನಿಸುತ್ತಿರುವುದು ಪ್ರಜಾಪ್ರಭುತ್ವದ ಮೇಲಿನ ನೇರ ಹಲ್ಲೆಯಾಗಿದೆ.
ಮತದಾರರ ಪಟ್ಟಿಯಲ್ಲಿರುವ ಗೊಂದಲಗಳು, ನಕಲಿ ಮತದಾರರ ಸೇರ್ಪಡೆ ಹಾಗೂ ಅರ್ಹ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವಂತಹ ಅಕ್ರಮಗಳ ವಿರುದ್ಧ ಜಾಗರೂಕರಾಗಿರಲು ಸ್ಥಳೀಯ ನಿವಾಸಿಗಳಿಗೆ ಮನವಿ ಮಾಡಿದೆ. ಪ್ರತಿಯೊಂದು ಮತವೂ ಅತ್ಯಮೂಲ್ಯವಾಗಿದ್ದು, ಯಾವುದೇ ಕಾರಣಕ್ಕೂ ಅರ್ಹ ನಾಗರಿಕರ ಮತದಾನದ ಹಕ್ಕು ಕಸಿಯಲ್ಪಡಬಾರದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ನಾವೆಲ್ಲರೂ ಒಗ್ಗೂಡಿ ಶ್ರಮಿಸೋಣ ಎಂದು ಸಚಿವರು ಕರೆ ನೀಡಿದರು.
ಈ ಅಭಿಯಾನದಲ್ಲಿ ಸ್ಥಳೀಯ ಮುಖಂಡರು, ಕಾರ್ಯಕರ್ತರು ಮತ್ತು ನಿವಾಸಿಗಳು ಪಾಲ್ಗೊಂಡಿದ್ದರು.

