ಪದವಿಯೊಂದೇ ಮಹತ್ವವಲ್ಲ ಕೌಶಲ್ಯ ಮುಖ್ಯ – ಡಿ.ವಿ.ಶಿವಾನಂದ್

News Desk

ಚಂದ್ರವಳ್ಳಿ ನ್ಯೂಸ್, ವಿಜಯನಗರ:
ಕೇವಲ ಪದವಿಗಳಿಸುವುದೊಂದೇ ಮಹತ್ವವಲ್ಲ ವಿದ್ಯಾರ್ಥಿಗಳು ಪ್ರಯೋಗಿಕವಾಗಿ ಕೌಶಲ್ಯ ಬೆಳೆಸಿಕೊಳ್ಳುವುದು ಮುಖ್ಯ ಎಂದು ತುಮಕೂರಿನ ಡಿಬಿಸನ್ಸ್ ಎಲೆಕ್ಟ್ರಿಕಲ್ ಕಂಟ್ರೋಲ್ ಪಾನೆಲ್ಸ್ ಮ್ಯಾನುಫ್ಯಾಕ್ಚರಿಂಗ್ ಕಂಪೆನಿಯ ಸಿಇಓ ಶಿವಾನಂದ ಡಿ.ವಿ ಅಭಿಪ್ರಾಯಪಟ್ಟರು.   

ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ವಿದ್ಯುತ್ ವಿಭಾಗದ ವತಿಯಿಂದ ಐಕ್ಯೂಎಸಿಯ ಸಹಯೋಗದಲ್ಲಿ ಎಲೆಕ್ಟ್ರಿಕಲ್ ಸ್ವಿಚ್‌ಗೇರ್‌ನ ಸುರಕ್ಷತೆ, ರಕ್ಷಣೆ ಮತ್ತು ಅನ್ವಯಿಕೆಗಳುಎಂಬ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಐದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ವಿದ್ಯುತ್ ಉಪಕರಣಗಳ ಬಳಕೆ, ಸುರಕ್ಷತೆ, ರಕ್ಷಣೆ ಹಾಗೂ ಕೈಗಾರಿಕಾ ವಲಯದಲ್ಲಿ ಅದರ ಅನ್ವಯಿಕೆಗಳ ಕುರಿತು ಐದು ದಿನದ ವಿಶೇಷ ಪ್ರಾಯೋಗಿಕ ತರಬೇತಿಯನ್ನು ನೀಡಿದರು.  

ಸ್ನಾತಕೋತ್ತರ ಪದವಿ ಹಾಗೂ ಇಂಜಿನಿಯರಿಂಗ್ ಡಾಕ್ಟರೇಟ್‌ಗಳಿಸಿದ್ದರೂ ಇಂದಿನ ಎಲೆಕ್ಟ್ರಿಕಲ್ ಇಂಜಿನಿಯರ್‌ಗಳಿಗೆ ಮನೆಯಲ್ಲಿ ಕೆಟ್ಟುಹೋದ ಮೋಟಾರ್ ಅನ್ನು ಸರಿಪಡಿಸಲು ಬರುವುದಿಲ್ಲ, ಇಂತಹ ಇಂಜಿನಿಯರ್‌ಗಳು ಕೈಗಾರಿಕಾ ಉದ್ಯಮಗಳಲ್ಲಿ ಕೌಶಲ್ಯದ ಕೊರತೆಯಿಂದ ಉದ್ಯೋಗಗಳಿಂದ ವಂಚಿತರಾಗುತ್ತಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಶಿಕ್ಷಣ ಕ್ಷೇತ್ರ ಮತ್ತು ಕೈಗಾರಿಕೆ ನಡುವಿನ ಅಂತರವನ್ನು ಸರಿದೂಗಿಸಲು ಇಂತಹ ತರಬೇತಿಗಳು ಪಠ್ಯದಲ್ಲಿ ಸೇರ್ಪಡೆಯಾಗಬೇಕು ಎಂದು ಹೇಳಿದರು.

ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವೇಶ ಶೆಟ್ಟಿ.ಎಸ್ ಮಾತನಾಡಿ ಕೈಗಾರಿಕಾ ವಲಯದಲ್ಲಿ ಕಾರ್ಯನಿರ್ವಹಿಸುವ ಸಂಧರ್ಭದಲ್ಲಿ ಯಾವುದಾದರೂ ಉಪಕರಣಗಳು ಸುರಕ್ಷತೆ ವಿಫಲವಾಗಿ ಕೆಟ್ಟರೆ ಇಂಜಿನಿಯರ್‌ಗಳು ನೂರಾರು ಪ್ರಶ್ನೆಗಳಿಗೆ ಗುರಿಯಾಗುತ್ತಾರೆ. ಅದನ್ನೆಲ್ಲಾ ಸರಿಪಡಿಸಲು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕೌಶಲ್ಯ ಅಭಿವೃದ್ಧಿಯನ್ನು ಹೊಂದಿದ್ದರೆ ಕೈಗಾರಿಕಾ ಸವಾಲುಗಳನ್ನು ಎದುರಿಸಲು ಇಂತಹ ತರಬೇತಿಗಳು ಸಹಾಯಕವಾಗಲಿವೆ  ಎಂದು ತಿಳಿಸಿದರು .   

ಕಾರ್ಯಕ್ರಮದ ಸಂಚಾಲಕ ಪ್ರೊ.ಮಧ್ವರಾಜ್.ಕೆ ಮಾತನಾಡಿ ವಿದ್ಯುತ್ ಉತ್ಪಾದನೆ ಎಂಬುದು ಆಹಾರ ತಯಾರಿಕೆ ಇದ್ದಂತೆ, ಆಹಾರವನ್ನು ಅಗತ್ಯಕ್ಕಿಂತ ಹೆಚ್ಚಿಗೆ ತಯಾರಿಸಿದರೆ ಅದು ವ್ಯರ್ಥವಾಗುತ್ತದೆ, ಕಡಿಮೆ ತಯಾರಿಸಿದರೆ ಸಾಕಾಗುವುದಿಲ್ಲ, ಅಧಿಕವಾಗಿ ತಯಾರಿಸಿದ ಆಹಾರವನ್ನು ದೀರ್ಘಕಾಲ ಶೇಖರಿಸಲು ಸಾಧ್ಯವಿಲ್ಲ ಅದೇ ರೀತಿ ವಿದ್ಯುತ್ ಅನ್ನು ಬೇಡಿಕೆಗೆ ಎಷ್ಟು ಅಗತ್ಯವಿದೆಯೋ ಅಷ್ಟೇ ತಯಾರಿಸಬೇಕಾಗುತ್ತದೆ ಅಗತ್ಯಕ್ಕಿಂತ ಹೆಚ್ಚಿಗೆ ಉತ್ಪಾದಿಸಿದರೆ ಅದನ್ನು ದೀರ್ಘಕಾಲ ಶೇಖರಿಸಲು ಆಗುವುದಿಲ್ಲ ಹಾಗೂ ಕಡಿಮೆ ಉತ್ಪಾದಿಸಿದರೆ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ, ಆದ ಕಾರಣ ವಿದ್ಯುತ್‌ನ  ಉತ್ಪಾದನೆ ಮತ್ತು ಬೇಡಿಕೆಗಳನ್ನು ಏಕ ಕಾಲದಲ್ಲಿ  ಸರಿದೂಗಬೇಕು ಎಂದು ಉದಾಹರಣೆ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು.

ಪಿಡಿಐಟಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕಲ್ಗುಡಿ ಮಂಜುನಾಥ್ ಮಾತನಾಡಿ ವಿದ್ಯಾರ್ಥಿಗಳ ಏಳ್ಗೆಗಾಗಿ ಆಡಳಿತ ಮಂಡಳಿಯಿಂದ ಎಲ್ಲಾ ಸಹಕಾರವನ್ನು ಒದಗಿಸುತ್ತೇವೆ ಎಂದು ಹೇಳಿದರು. 

ಪಿಡಿಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಯು.ಎಂ.ರೋಹಿತ್ ಮಾತನಾಡಿ ಕೈಗಾರಿಕಾ ಕ್ಷೇತ್ರಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ತಯಾರಿಸಲು ಇಂತಹ ಕಾರ್ಯಾಗಾರಗಳು ಸಹಕಾರಿಯಾಗಲಿವೆ ಈ ತರಬೇತಿಗಳನ್ನು ಹೊಂದಿ ವಿದ್ಯಾರ್ಥಿಗಳು ತಮ್ಮ ಮಿನಿ ಪ್ರಾಜೆಕ್ಟ್ ಹಾಗೂ ಇಂಜಿನಿಯರಿಂಗ್ ಪ್ರಾಜೆಕ್ಟ್ ಗಳನ್ನು ತಾವೇ ತಯಾರಿಸಲು ಸಿದ್ಧರಾಗಬೇಕು  ಎಂದು ಹೇಳಿದರು.

ವಿದ್ಯುತ್ ವಿಭಾಗದ ಮುಖ್ಯಸ್ಥ ಡಾ.ಎಸ್ ಪ್ರಕಾಶ್ ಮತನಾಡಿ ಡಿಬಿಸನ್ಸ್ ಕಂಪನಿಯ ಜೊತೆ ನಾವು ಒಡಂಬಡಿಕೆ ಮಾಡಿಕೊಂಡು ಇಂತಹ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ ಎಂದು ಹೇಳಿದರು. 

ಪಿ.ಡಿ.ಐ.ಟಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕಲ್ಗುಡಿ ಮಂಜುನಾಥ್, ಪ್ರಾಂಶುಪಾಲ ಡಾ.ಯು.ಎಂ.ರೋಹಿತ್, ಉಪಪ್ರಾಂಶುಪಾಲ ಡಾ.ಪಾರ್ವತಿ ಕಡ್ಲಿ, ವಿದ್ಯುತ್ ವಿಭಾಗದ ಮುಖ್ಯಸ್ಥ ಡಾ.ಪ್ರಕಾಶ್ ಎಸ್, ಕಾರ್ಯಕ್ರಮದ ಸಂಚಾಲಕ ಪ್ರೊ.ಮಧ್ವರಾಜ್ ಕೆ. ಹಾಗೂ ಪ್ರೊ.ಸುಮಾ ಜಿ.ಸಿ, ಡೀನ್ ಡಾ.ಮಂಜುಳಾ ಎಸ್.ಡಿ, ವಿವಿಧ ವಿಭಾಗದ ಮುಖ್ಯಸ್ಥರು, ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗದವರು ಹಾಗೂ ವಿದ್ಯುತ್ ವಿಭಾಗದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಪ್ರೊ.ಫಿರದೋಶ್ ಸ್ವಾಗತಿಸಿದರು. ಪ್ರೊ.ಸ್ವಪ್ನ ನಿರೂಪಣೆ ಮಾಡಿದರು. ಕು.ಭಾಸ್ಕರ್ ಪ್ರಾರ್ಥನೆ ಗೀತೆ ಹಾಡಿದರು. ಕಾರ್ಯಕ್ರಮದ ಸಂಚಾಲಕ ಪ್ರೊ. ಮಧ್ವರಾಜ್ ಕಾರ್ಯಕ್ರಮದ ವಿವರಗಳನ್ನು ತಿಳಿಸಿದರು ಪ್ರೊ. ಸುಮಾ ಜಿ.ಸಿ ವಂದಿಸಿದರು. ವಿವಿಧ ವಿಭಾಗದ ಮುಖ್ಯಸ್ಥರು, ವಿದ್ಯುತ್ ವಿಭಾಗದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗದವರು ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಿದರು.

 

Share This Article
error: Content is protected !!
";