ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಹಮ್ಮಿಕೊಂಡಿದ್ದ ಕೆಪಿಸಿಸಿ ಗ್ಯಾರಂಟಿ ಸಮಿತಿಯ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ತಾಲೂಕು ಅಧ್ಯಕ್ಷರ ಕಾರ್ಯಾಗಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪಾಲ್ಗೊಂಡು ಮಾತನಾಡಿದರು.
ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳನ್ನು ಮನೆ ಮನೆಗೂ ತಲುಪಿಸಲು ರಾಜ್ಯಾದ್ಯಂತ ಗ್ಯಾರಂಟಿ ಸಮಿತಿಗಳನ್ನು ರಚಿಸಲಾಗಿದೆ. ಪಕ್ಷಕ್ಕೆ ಅಧಿಕಾರವನ್ನು ತಂದಿರುವ ಕಾರ್ಯಕರ್ತರಿಗೆ ಶಕ್ತಿ ತುಂಬುವುದು ನಮ್ಮ ಕರ್ತವ್ಯ. ನಮಗೆ ಅಧಿಕಾರ ನೀಡಿದವರಿಗೆ ವಿವಿಧ ಸಮಿತಿಗಳನ್ನು ರಚಿಸಿ ಎಲ್ಲಾ ವರ್ಗದವರಿಗೆ ಅಧಿಕಾರವನ್ನು ನೀಡುವ ಕೆಲಸವನ್ನು ನಾವು ಮಾಡಿದ್ದೇವೆ ಎಂದು ಶಿವಕುಮಾರ್ ಹೇಳಿದರು.
ಬಡವರ ಕಲ್ಯಾಣಕ್ಕಾಗಿ ಪಂಚ ಗ್ಯಾರಂಟಿಗಳ ಮೂಲಕ 56 ಸಾವಿರ ಕೋಟಿ ರೂ. ನೀಡುತ್ತಿದ್ದೇವೆ. ರೈತರಿಗೆ ವಿದ್ಯುತ್ ಒದಗಿಸಲು 19 ಸಾವಿರ ಕೋಟಿ ರೂ. ನೀಡುತ್ತಿದ್ದೇವೆ. ವಿಧವಾ ಪಿಂಚಣಿ ಇನ್ನಿತರ ಯೋಜನೆ ಸೇರಿದಂತೆ ಸಾಮಾಜಿಕ ಸೌಲಭ್ಯಗಳಿಗಾಗಿ 1 ಲಕ್ಷ ಕೋಟಿ ರೂ. ಹಣ ನೀಡುತ್ತಿದ್ದೇವೆ.
ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಎಲ್ಲ ವರ್ಗದ ಜನರ ಕೈಗೆ ಅಧಿಕಾರ ಬಂದಂತೆ. ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸೋಣ ಎಂದು ಡಿಕೆ ಶಿವಕುಮಾರ್ ಅವರು ಕರೆ ನೀಡಿದರು.