ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡೆಲಿವರಿ ಬಾಯ್ ಮೇಲೆ ಇಬ್ಬರು ಕಿಡಿಗೇಡಿಗಳು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಿಡಿಗೇಡಿಗಳು ಅಮಾನವೀಯವಾಗಿ ವರ್ತಿಸುತ್ತಾ ಅಟ್ಟಹಾಸ ಮೆರೆಯುತ್ತಿದ್ದ ಕಿಡಿಗೇಡಿಗಳನ್ನು ಸ್ಥಳೀಯರು ಹಿಡಿದು ಥಳಿಸಿದ್ದಾರೆ.
ಬೈಯ್ಯಪ್ಪನಹಳ್ಳಿ ವ್ಯಾಪ್ತಿಯ ಮಹಾದೇವಪುರ ಮುಖ್ಯರಸ್ತೆಯಲ್ಲಿ ಈ ಘಟನೆ ತಡರಾತ್ರಿ ನಡೆದಿದೆ.
ಏನಿದು ಘಟನೆ:
ಡೆಲಿವರಿ ಬಾಯ್ ಸ್ಕೂಟರ್ನಲ್ಲಿ ಸಾಗುವಾಗ ರಸ್ತೆ ತಿರುವಿನ ಬಳಿ ಆರೋಪಿಗಳಿಬ್ಬರು ಸ್ಕೂಟರ್ನಲ್ಲಿ ಬಂದಿದ್ದಾರೆ. ಡೆಲಿವರಿ ಬಾಯ್ ತಕ್ಷಣ ತನ್ನ ಸ್ಕೂಟರ್ ನಿಲ್ಲಿಸಿದ್ದಾನೆ. ಆದರೆ ಆರೋಪಿಗಳು ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದಿದ್ದಾರೆ. ಇದರಿಂದ ಸಿಟ್ಟಿಗೆದ್ದು ಏಕಾಏಕಿ ಹೆಲ್ಮೆಟ್ನಿಂದ ಡೆಲಿವರಿ ಬಾಯ್ ಮೇಲೆ ಹಲ್ಲೆ ಮಾಡಿದ್ದಾರೆ.
ರಸ್ತೆಯಲ್ಲೇ ಆತನನ್ನು ಬೀಳಿಸಿ ಕಾಲಿನಿಂದ ಒದ್ದು ಅಮಾನವೀಯವಾಗಿ ವರ್ತಿಸಿದ್ದಾರೆ. ಡೆಲಿವರಿ ಬಾಯ್ ಮನವಿಯನ್ನೂ ಕೇಳದೆ ಹಲ್ಲೆಗೈಯ್ಯುತ್ತಿದ್ದ ಆರೋಪಿಗಳನ್ನು ಗಮನಿಸಿದ ಕೆಲ ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಪ್ರಶ್ನಿಸಿದವರ ಮೇಲೂ ಎಗರಾಡಿದಾಗ ಸ್ಥಳೀಯರು ಒಟ್ಟಾಗಿ ಆರೋಪಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.
ಘಟನೆಯ ದೃಶ್ಯಗಳು ಹತ್ತಿರದ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆ ಬಗ್ಗೆ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ಹಲ್ಲೆಗೊಳಗಾದ ಡೆಲಿವರಿ ಬಾಯ್ ಹಾಗೂ ಆರೋಪಿಗಳನ್ನು ಪತ್ತೆ ಹಚ್ಚಲು ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.

