ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸರ್ಕಾರದ ಭೂಮಿಯನ್ನು ಹೆಚ್ಚುವರಿಯಾಗಿ ಒತ್ತುವರಿ ಮಾಡಿಕೊಂಡಿರುವ ನಾರಾಯಣ ಮೈನ್ಸ್, ಜಾನ್ ಮೈನ್ಸ್ ಇನ್ನಿತರೆ ಮೈನ್ಸ್‌ಗಳ ವಿರುದ್ದ ತನಿಖೆ ನಡೆಸಿ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಭೀಮಸಮುದ್ರದ ಹತ್ತಿರ ಮೈನಿಂಗ್ ನಡೆಸುತ್ತಿರುವ ನಾರಾಯಣ್ ಮೈನ್ಸ್, ಜಾನ್ ಮೈನ್ಸ್ ಇನ್ನು ಕೆಲವು ಮೈನ್ಸ್‌ನವರು ಸರ್ಕಾರದಿಂದ ಪಡೆದುಕೊಂಡಿರುವ ಭೂಮಿಗಿಂತಲೂ ಅಧಿಕ ಭೂಮಿ ಒತ್ತುವರಿ ಮಾಡಿಕೊಂಡು ದಿನಕ್ಕೆ ಸಾವಿರಾರು ಲೋಡ್ ಅದಿರು ಸಾಗಾಣಿಕೆ ಮಾಡುತ್ತ ಸರ್ಕಾರದ ಸಂಪತ್ತನ್ನು ಲೂಟಿ ಒಡೆಯುತ್ತಿರುವುದರ ವಿರುದ್ದ ಕ್ರಮ ಕೈಗೊಂಡು ಒತ್ತುವರಿಯಾಗಿರುವ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಬೇಕು. ಒತ್ತುವರಿ ಭೂಮಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಿದ್ದರೆ ಅಂತಹ ಮೈನ್ಸ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ದಂಡ ಸಮೇತ ವಸೂಲಿ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಹಿರೇಗುಂಟನೂರು, ಬೊಮ್ಮೇನಹಳ್ಳಿ, ಹಳಿಯೂರು, ಸಿದ್ದಾಪುರ, ಮಾಳಪ್ಪನಹಟ್ಟಿ ಸುತ್ತಮುತ್ತಲ ಗ್ರಾಮಗಳ ಜನ ಅದಿರು ಧೂಳಿನಿಂದ ಅನಾರೋಗ್ಯಪೀಡಿತರಾಗುತ್ತಿದ್ದಾರಲ್ಲದೆ ಸುತ್ತಮುತ್ತಲಿನ ಜಮೀನಿನಲ್ಲಿ ಬೆಳೆಗಳ ಮೇಲೆ ಧೂಳು ಕೂರುತ್ತಿರುವುದರಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಸಿ.ಹೆಚ್.ಮಂಜುನಾಥ್ ಜಿಲ್ಲಾಧಿಕಾರಿಗಳ ಗಮನ ಸೆಳೆದರು.
ಇಂತಿಷ್ಟು ವರ್ಷಗಳ ಕಾಲ ಗುತ್ತಿಗೆ ಪಡೆದಿರುವ ನಾರಾಯಣ ಮೈನ್ಸ್ ಮತ್ತು ಜಾನ್ ಮೈನ್ಸ್ ಇನ್ನಿತರೆ ಮೈನಿಂಗ್‌ನವರು ಅಕ್ಕಪಕ್ಕದಲ್ಲಿರುವ ಬೆಟ್ಟ-ಗುಡ್ಡಗಳು ಹಾಗೂ ಕೃಷಿ ಭೂಮಿಗಳನ್ನು ಅಕ್ರಮವಾಗಿ ಬಗೆಯುತ್ತಿದ್ದಾರೆ. ಸುಮಾರು ೨೫ ವರ್ಷಗಳಿಂದಲೂ ಅಕ್ರಮವಾಗಿ ಗಣಿ ದಂಧೆ ನಡೆಸುತ್ತಿರುವವರ ಮೇಲೆ ಕ್ರಮ ಕೈಗೊಂಡು ಸರ್ಕಾರದ ಭೂಮಿಯನ್ನು ಉಳಿಸಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯವರು ಎಚ್ಚರಿಸಿದರು.