ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಜಿಲ್ಲೆಯ ಬಡ ವಸತಿ ರಹಿತರಿಗೆ ನಿವೇಶನ ನೀಡಿ ಮನೆಗಳನ್ನು ಕಟ್ಟಿಸಿಕೊಡಬೇಕೆಂದು ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಯಿಂದ ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಸತಿ ಸಚಿವ ಬಿ.ಝಡ್. ಜಮೀರ್ ಅಹಮದ್‌ಖಾನ್‌ಗೆ ಮನವಿ ಸಲ್ಲಿಸಲಾಯಿತು.
ಶುಕ್ರವಾರ ನಗರಕ್ಕೆ ಆಗಮಿಸಿದ್ದ ಸಚಿವ ಜಮೀರ್ ಅಹಮದ್‌ಖಾನ್‌ಗೆ ಮನವಿ ಸಲ್ಲಿಸಿದ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಕಾಂ.ಜಿ.ಸಿ.ಸುರೇಶ್‌ಬಾಬು ಜಿಲ್ಲೆಯಲ್ಲಿ ಒಂದು ಲಕ್ಷ ೬೮ ಸಾವಿರ ನಿವೇಶನ ರಹಿತರಿದ್ದಾರೆ. ಮನೆಗಳಿಗಾಗಿ ೭೨೧೬೫ ಹಾಗೂ ನಿವೇಶನಗಳಿಗಾಗಿ ೨೭೮೯೭ ಅರ್ಜಿಗಳನ್ನು ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಸಲ್ಲಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಭೂಮಿಯನ್ನು ಕಾಯ್ದಿರಿಸಿ ನಿವೇಶನ ರಹಿತರಿಗೆ ವಿತರಿಸಿ ಮನೆಗಳನ್ನು ಕಟ್ಟಿಸಿಕೊಳ್ಳಲು ಹಣ ಮಂಜೂರು ಮಾಡುವಂತೆ ವಿನಂತಿಸಿದರು.
ಕೇರಳದಲ್ಲಿ ಒಂದು ನಿವೇಶನಕ್ಕೆ ೨.೫೦ ಲಕ್ಷ ಹಾಗೂ ಮನೆ ಕಟ್ಟಿಸಿಕೊಳ್ಳಲು ೪ ಲಕ್ಷ ರೂ.ಗಳನ್ನು ನೀಡಲಾಗುತ್ತಿದೆ. ತೆಲಂಗಾಣದಲ್ಲಿ ಮನೆ ಕಟ್ಟಿಸಿಕೊಳ್ಳಲು ಐದು ಲಕ್ಷ ರೂ.ಗಳನ್ನು ನೀಡುತ್ತಿದೆ.
ನಮ್ಮ ರಾಜ್ಯದಲ್ಲಿ ಬಡವರು ಮನೆಗಳನ್ನು ಕಟ್ಟಿಸಿಕೊಳ್ಳಲು ಒಂದು ಜಾಗಕ್ಕೆ ೨.೫೦ ಲಕ್ಷ ರು. ಮನೆ ಕಟ್ಟಿಸಿಕೊಳ್ಳಲು ೪ ಲಕ್ಷ ರೂ.ಗಳನ್ನು ನೀಡಬೇಕೆಂದು ಕಾಂ.ಜಿ.ಸಿ.ಸುರೇಶ್‌ಬಾಬು ಒತ್ತಾಯಿಸಿದಾಗ ಹಳೆ ಮನೆಗಳು ಮುಗಿದ ಮೇಲೆ ಹೊಸ ಮನೆಗಳನ್ನು ಕಟ್ಟಿಸಿಕೊಡಲು ಬಜೆಟ್‌ನಲ್ಲಿ ಹಣ ಮೀಸಲಿಡುವ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆಂದು ಸಚಿವ ಜಮೀರ್ ಅಹಮದ್‌ಖಾನ್ ಭರವಸೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಕೆ.ಅನ್ವರ್‌ಪಾಷ ಇವರುಗಳು ಈ ಸಂದರ್ಭದಲ್ಲಿದ್ದರು.

