ಚಂದ್ರವಳ್ಳಿ ನ್ಯೂಸ್, ನವದೆಹಲಿ:
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದಟ್ಟವಾದ ಮಂಜು, ಚಳಿ ಮತ್ತು ವಾಯು ಮಾಲಿನ್ಯ ಜಾಸ್ತಿ ಇದ್ದುದ್ದರಿಂದಾಗಿ ಗುರುವಾರ ವಿಮಾನ ಹಾರಾಟ ಮತ್ತು ರೈಲು ಸಂಚಾರದಲ್ಲಿ ಒಂದಿಷ್ಟು ವ್ಯತ್ಯಯವಾಗಿದೆ.
ಉತ್ತರ ಭಾರತದ ಹಲವಾರು ಭಾಗಗಳು, ರಾಜಧಾನಿ ದೆಹಲಿ ಸೇರಿದಂತೆ ಇತರೆಡೆಗಳಲ್ಲಿ ದಟ್ಟವಾದ ಮಂಜು ಆವರಿಸಿದ್ದು, ಗೋಚರತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ದೆಹಲಿಯಲ್ಲಿ ಕನಿಷ್ಠ ತಾಪಮಾನ 10.6 ಡಿಗ್ರಿ ಸೆಲ್ಸಿಯಸ್ಗೆ ತಲುಪಿದ್ದು, ಹಗಲಿನಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಟ್ಟವಾದ ಮಂಜು ರೈಲು ಮತ್ತು ವಿಮಾನ ಸಂಚಾರಕ್ಕೆ ಅಡ್ಡಿಪಡಿಸಿತು. ಇದರಿಂದಾಗಿ ವಿಮಾನ ಮತ್ತು ರೈಲು ಕಾರ್ಯಾಚರಣೆಯಲ್ಲಿ ಅಡಚಣೆ ಉಂಟಾಗಿ, ಹಲವಾರು ಪ್ರಯಾಣಿಕರಿಗೆ ತೊಂದರೆಯಾಯಿತು.
ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಗೋಚರತೆ ಕಡಿಮೆ ಇದ್ದ ಕಾರಣ ಕೆಲವು ವಿಮಾನಗಳ ಕಾರ್ಯಾಚರಣೆ ಸ್ಥಗಿತಗೊಂಡರೆ, ಕೆಲ ವಿಮಾನಗಳ ಹಾರಾಟದಲ್ಲಿ ವಿಳಂಬವಾದವು. ಇದರಿಂದಾಗಿ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಸಲಹೆಗಳನ್ನು ನೀಡಿವೆ. ಪ್ರಯಾಣಿಕರು ಜಾಗರೂಕರಾಗಿರಲು ಮತ್ತು ಅನಾನುಕೂಲತೆ ತಪ್ಪಿಸಲು ವಿಮಾನ ವೇಳಾಪಟ್ಟಿ ನವೀಕರಣಗಳನ್ನು ಪರಿಶೀಲಿಸಲು ಎಚ್ಚರಿಸಿವೆ.
ಗುರುವಾರ ಮುಂಜಾನೆ ಪಾಲಂನಲ್ಲಿ ಭಾರತ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ ಅಲ್ಪ ಮಳೆಯಾಗಿದೆ. ಬೆಳಗ್ಗೆ 8.30ರ ವೇಳೆಗೆ ಸಫ್ದರ್ಜಂಗ್ನಲ್ಲಿ 10.6 ಡಿಗ್ರಿ ಸೆಲ್ಸಿಯಸ್, ಪಾಲಂನಲ್ಲಿ 9 ಡಿಗ್ರಿ ಸೆಲ್ಸಿಯಸ್, ಲೋಧಿ ರಸ್ತೆಯಲ್ಲಿ 10 ಡಿಗ್ರಿ ಸೆಲ್ಸಿಯಸ್, ರಿಡ್ಜ್ನಲ್ಲಿ 9.9 ಡಿಗ್ರಿ ಸೆಲ್ಸಿಯಸ್ ಮತ್ತು ಅಯನಗರದಲ್ಲಿ 10.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ತೋರಿಸಿದೆ ಎಂದು ಐಎಂಡಿ ತಿಳಿಸಿದೆ.
ಗುರುವಾರ ಬೆಳಗ್ಗೆ 7 ಗಂಟೆಗೆ, ಜನರು ಬೀದಿಗಳಲ್ಲಿ ಚಳಿ ಮತ್ತು ಮಾಲಿನ್ಯದಿಂದ ತೊಂದರೆಗೀಡಾಗಿರುವುದು ಕಂಡುಬಂದಿದೆ. ದೆಹಲಿಯಲ್ಲಿ ಹೆಚ್ಚುತ್ತಿರುವ ಚಳಿಯಿಂದಾಗಿ ಜನರು ಶಾಲು ಮತ್ತು ಜಾಕೆಟ್ ಧರಿಸಿರುವುದು ಕಂಡುಬಂದರೆ, ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಪಾದಚಾರಿಗಳು ಮುಖವಾಡಗಳನ್ನು ಧರಿಸಿರುವುದು ಕಂಡುಬಂದಿದೆ. ಚಳಿಯ ಜೊತೆ ದೆಹಲಿಯಲ್ಲಿ ವಿಪರೀತ ಮಾಲಿನ್ಯ ಕೂಡ ಸಮಸ್ಯೆಯಾಗಿ ಪರಿಣಮಿಸಿದೆ.
ಜನವರಿ-3ರಿಂದ ಕನಿಷ್ಠ ತಾಪಮಾನ ಮತ್ತಷ್ಟು ಕಡಿಮೆಯಾಗುವುದರಿಂದ ಶೀತದ ಪರಿಸ್ಥಿತಿಗಳು ಬೆಳೆಯಬಹುದು, ಹಿಮಾಲಯ ಪ್ರದೇಶದಿಂದ ತಂಪಾದ ಗಾಳಿ ರಾಷ್ಟ್ರ ರಾಜಧಾನಿಯ ಕಡೆಗೆ ಚಲಿಸುವ ನಿರೀಕ್ಷೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಗುರುವಾರ ಬೆಳಗ್ಗೆ ರಾಷ್ಟ್ರ ರಾಜಧಾನಿಯಾದ್ಯಂತ ದಟ್ಟವಾದ ಮಂಜು ಕವಿದಿದ್ದು, ಪಾಲಂ ಮತ್ತು ಸಫ್ದರ್ಜಂಗ್ ಪ್ರದೇಶದಲ್ಲಿ ಬೆಳಗ್ಗೆ 7.30ರ ಸುಮಾರಿಗೆ 500 ಮೀಟರ್ ಗೋಚರತೆ ದಾಖಲಿಸಿದೆ ಎಂದು ಐಎಂಡಿ ತಿಳಿಸಿದೆ.
ಗಾಳಿಯ ಗುಣಮಟ್ಟ ಕೂಡ ‘ತುಂಬಾ ಕಳಪೆ‘ ವರ್ಗದಲ್ಲಿಯೇ ಉಳಿದಿದೆ. ನಗರದ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) ಬೆಳಗ್ಗೆ 10 ಗಂಟೆಗೆ 371 ರಷ್ಟಿತ್ತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ದತ್ತಾಂಶ ತೋರಿಸಿದೆ.
ನೋಯ್ಡಾ (AQI 364) ಎರಡನೇ ಸ್ಥಾನದಲ್ಲಿದ್ದರೆ, ಗಾಜಿಯಾಬಾದ್ (338) ಮತ್ತು ಗ್ರೇಟರ್ ನೋಯ್ಡಾ (336) ಕೂಡ ಅತ್ಯಂತ ಕಳಪೆ ಗಾಳಿಯ ಗುಣಮಟ್ಟ ಹೊಂದಿರುವ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

