ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಅಮಾನತು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಾಲಿ ಚಿತ್ರದುರ್ಗ ಜಿಲ್ಲಾ ತೋಟಗಾರಿಕೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲಾ ಉಪ ನಿರ್ದೇಶಕರು ತಾವು ಕರ್ತವ್ಯ ನಿರ್ವಹಿಸಿದ ನಿಕಟಪೂರ್ವ ಜಿಲ್ಲೆಯಲ್ಲಿ ಎಸಗಿರುವ ಕಾನೂನು ಬಾಹಿರ ಅಧಿಕಾರ ದುರುಪಯೋಗ
, ರೈತರು ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಆರೋಪ ಸೇರಿದಂತೆ ಮತ್ತಿತರ ಆರೋಪಗಳು ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶರಣಬಸಪ್ಪ ಬೋಗಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಸಿ.ರೂಪಾ ಆದೇಶ ಹೊರಡಿಸಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಶರಣಬಸಪ್ಪ ಬೋಗಿ ಅವರು ತೋಟಗಾರಿಕೆ ಇಲಾಖೆ ಜಿಲ್ಲಾ ಉಪ ನಿರ್ದೇಶಕರಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಹಲವು ಆರೋಪಗಳು ಕೇಳಿ ಬಂದಿದ್ದವು.

ನಂತರ ಅವರನ್ನು ಚಿತ್ರದುರ್ಗ ಜಿಲ್ಲೆಗೆ ವರ್ಗಾವಣೆ ಮಾಡಲಾಗಿತ್ತು. ಅವರ ವಿರುದ್ಧ ಯಾದಗಿರಿ ಕಛೇರಿಯಲ್ಲಿ ಅಧಿಕಾರಿ/ಸಿಬ್ಬಂದಿ ಹಾಗೂ ದೂರುದಾರರ ಸಮ್ಮುಖದಲ್ಲಿ ದೂರಿನಲ್ಲಿ ನೀಡಿರುವ 14 ಆರೋಪಗಳ ಅಂಶಗಳನ್ನು ನಿಯಮಾನುಸಾರ ಪರಿಶೀಲಿಸಿ, ಆರೋಪ-01, 02, 06, 07, 08, 09, 10 ಮತ್ತು 11 ಆರೋಪಗಳಿಗೆ ದೂರುದಾರರು ಸಲ್ಲಿಸಿರುವ ದಾಖಲೆಗಳು ಪುಷ್ಟಿಕರಿಸಿರುವುದಿಲ್ಲವೆಂದು/ ಸ್ಪಷ್ಟಿಕರಣ ಅವಶ್ಯಕತೆ ಇರುವುದಿಲ್ಲವೆಂದು ಅಭಿಪ್ರಾಯಿಸಿದ್ದು, ಆರೋಪ -03, 04, 05, 12, 13 ಮತ್ತು 14 ಮಾಡಿರುವ ಆರೋಪಗಳು ನಿಜವಿರುತ್ತವೆ ಎಂದು ತಿಳಿಸಿ,

ಸದರಿ ಅಧಿಕಾರಿಯವರು ತಮ್ಮ ವೈಯಕ್ತಿಕ ದ್ವೇಷಕ್ಕಾಗಿ ಕಛೇರಿಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಬಳಸಿಕೊಂಡು ದೂರುದಾರರ ಮೇಲೆ ಎಫ್.ಐ.ಆರ್. ಮಾಡಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆಂಬ ಅಭಿಪ್ರಾಯದೊಂದಿಗೆ ತೋಟಗಾರಿಕೆ ನಿರ್ದೇಶಕರಿಗೆ ವರದಿ ಸಲ್ಲಿಸಿರುತ್ತಾರೆ.

ದಾಖಲಾಗಿದ್ದ ದೂರುಗಳ ಪರಿಶೀಲನೆ ನಡೆಸಿದ ನಂತರ ಸಲ್ಲಿಸಿದ ವರದಿ ಆಧರಿಸಿ ಅಮಾನತು ಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿ.ರೂಪಾ ತಿಳಿಸಿದ್ದಾರೆ.

ಉಪ ನಿರ್ದೇಶಕರು ಎಸಗಿರುವ ಕೃತ್ಯಗಳು ಮೇಲ್ನೋಟಕ್ಕೆ ದೃಢಪಟ್ಟಿರುವುದರಿಂದ ಶಿಸ್ತು ಕ್ರಮ ಬಾಕಿ ಇರಿಸಿ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು 1957ರ ನಿಯಮ 10(1)(ಡಿ) ರನ್ನಯ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ. ಶಿವಮೊಗ್ಗ ತೋಟಗಾರಿಕೆ ಉಪನಿರ್ದೇಶಕಿ ಜಿ.ಸವಿತಾ ಅವರಿಗೆ ಹೆಚ್ಚುವರಿ ಅಧಿಕಾರ ವಹಿಸಿಕೊಳ್ಳಲು ಇದೇ ಸಂದರ್ಭದಲ್ಲಿ ಅವರು ಆದೇಶಿಸಿದ್ದಾರೆ.

- Advertisement -  - Advertisement - 
Share This Article
error: Content is protected !!
";