ಅ.18 ರಿಂದ ಜಿಲ್ಲೆಗೆ ಉಪ ಲೋಕಾಯುಕ್ತರ ಭೇಟಿ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಅಕ್ಟೋಬರ್ ೧೮
, ೧೯ ಹಾಗೂ ೨೦ರಂದು ೩ ದಿನಗಳ ಕಾಲ ಜಿಲ್ಲೆಗೆ ಭೇಟಿ ನೀಡಿ ಸಾರ್ವಜನಿಕ ಕುಂದು ಕೊರತೆ ಸ್ವೀಕಾರ, ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆ, ಲೋಕಾಯುಕ್ತ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮ, ಸಾರ್ವಜನಿಕ ಆಡಳಿತದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪಾತ್ರ, ಜಿಲ್ಲೆಯಲ್ಲಿ ಬಾಕಿ ಇರುವ ಲೋಕಾಯುಕ್ತ ದೂರುಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮಗಳನ್ನು ನಡೆಸಲಿದ್ದು, ಅಗತ್ಯ ಮಾಹಿತಿಯೊಂದಿಗೆ ಉಪ ಲೋಕಾಯುಕ್ತರ ಎಲ್ಲಾ ಕಾರ್ಯಕ್ರಮಗಳಲ್ಲೂ ಹಾಜರಾಗಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

        ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಉಪ ಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿ ತನಿಖೆಗೆ ಬಾಕಿ ಇರುವ ದೂರು ಪ್ರಕರಣಗಳ ವಿಚಾರಣೆ ಮತ್ತು ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರಲ್ಲದೆ, ಈವರೆಗೆ ನೋಂದಣಿಯಾದ ದೂರು ಪ್ರಕರಣಗಳ ಮಾಹಿತಿ ಪಡೆದ ಅವರು, ಉಪ ಲೋಕಾಯುಕ್ತರ ಕಾರ್ಯಕ್ರಮಗಳಿಗೆ ಎಲ್ಲಾ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಹಾಜರಾಗಬೇಕು. ಲೋಕಾಯುಕ್ತ ಪ್ರಕರಣ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿಸಿಕೊಂಡಿದ್ದಲ್ಲಿ ಸೂಕ್ತ ಕಾರಣವನ್ನು ಉಪ ಲೋಕಾಯುಕ್ತರ ಗಮನಕ್ಕೆ ತರಬೇಕು ಎಂದು ತಿಳಿಸಿದರು.

        ಬಾಕಿ ಉಳಿದಿರುವ ಲೋಕಾಯುಕ್ತ ದೂರು ಅರ್ಜಿಗಳನ್ನು ವೈಯಕ್ತಿಕ ಗಮನಹರಿಸಿ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ವಿಲೇವಾರಿ ಮಾಡಲು ಕಾನೂನು ಚೌಕಟ್ಟಿನಲ್ಲಿ ಅವಕಾಶವಿಲ್ಲದಿದ್ದಲ್ಲಿ ದೂರುದಾರರರಿಗೆ ಹಿಂಬರಹ ನೀಡಬೇಕು. ಹಿಂಬರಹ ನೀಡಿರುವ ಬಗ್ಗೆ ಅಗತ್ಯ ದಾಖಲೆಗಳನ್ನು ಸಂಬಂಧಿಸಿದ ಇಲಾಖಾಧಿಕಾರಿಗಳು ಹೊಂದಿರಬೇಕು ಎಂದು ನಿರ್ದೇಶನ ನೀಡಿದರು.

        ತಾಲ್ಲೂಕುವಾರು ಬಾಕಿ ಇರುವ ಲೋಕಾಯುಕ್ತ ದೂರು ಅರ್ಜಿಗಳ ಮಾಹಿತಿ ಪಡೆದ ಅವರು, ದೂರು ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಇತ್ತೀಚೆಗಷ್ಟೇ ವರ್ಗಾವಣೆ ಹೊಂದಿ ಅಧಿಕಾರವಹಿಸಿಕೊಂಡಿದ್ದೇನೆ. ದೂರು ಅರ್ಜಿಗಳ ಬಗ್ಗೆ ಮಾಹಿತಿ ಇಲ್ಲ ಎಂದು ನೆಪ ಹೇಳದೆ ಉಪ ಲೋಕಾಯುಕ್ತರಿಗೆ ಸಮರ್ಪಕ ಉತ್ತರವನ್ನು ನೀಡಬೇಕು ಎಂದು ತಾಕೀತು ಮಾಡಿದರು.

        ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ೪೯, ಕಂದಾಯ ಇಲಾಖೆಯ ೨೦, ನಗರಾಭಿವೃದ್ಧಿ ಕೋಶದ ೧೨, ಆರೋಗ್ಯ ಇಲಾಖೆ ೧, ನಿರ್ಮಿತಿ ಕೇಂದ್ರದ ೧ ದೂರು ಅರ್ಜಿಗಳು ಬಾಕಿ ಇವೆ ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

        ಉಪ ಲೋಕಾಯುಕ್ತರೊಂದಿಗೆ ಕರ್ನಾಟಕ ಲೋಕಾಯುಕ್ತ ಅಪರ ನಿಬಂಧಕ(ವಿಚಾರಣೆಗಳು-೫)ರಾದ ಜೆ.ವಿ. ವಿಜಯಾನಂದ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ, ಕರ್ನಾಟಕ ಲೋಕಾಯುಕ್ತ ಉಪ ನಿಬಂಧಕ(ವಿಚಾರಣೆಗಳು-೨)ರಾದ ಕೆ.ಎಂ. ಬಸವರಾಜಪ್ಪ ಹಾಗೂ ಉಪ ನಿಬಂಧಕ(ವಿಚಾರಣೆಗಳು-೧)ರಾದ ಎನ್.ವಿ. ಅರವಿಂದ ಸೇರಿದಂತೆ ವಿವಿಧ ನ್ಯಾಯಾಧೀಶರು ಸಭೆಯಲ್ಲಿ ಹಾಜರಿದ್ದು, ಸಾರ್ವಜನಿಕರ ಅಹವಾಲುಗಳ ವಿಚಾರಣೆ ನಡೆಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದಾರೆ. ಸಂಬಂಧಿಸಿದ ಇಲಾಖಾ ಅಧಿಕಾರಿಗಳು ತಮ್ಮ ವಿಷಯ ನಿರ್ವಾಹಕರೊಂದಿಗೆ ದೂರು ಅರ್ಜಿಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕೆಂದು ಸೂಚಿಸಿದರು.

        ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳು, ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಉಪ ಲೋಕಾಯುಕ್ತರ ಕಾರ್ಯಕ್ರಮಗಳ ವಿವರ :
        ರಾಜ್ಯ ಉಪಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿ ಬಿ. ವೀರಪ್ಪ ಅವರ ನೇತೃತ್ವದಲ್ಲಿ ಅಕ್ಟೋಬರ್ ೧೮ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧.೩೦ ಹಾಗೂ ಮ.೨.೩೦ ರಿಂದ ಸಂಜೆ ೫ ಗಂಟೆಯವರೆಗೆ ನಗರದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕ ಅಹವಾಲು/ಕುಂದು-ಕೊರತೆ ಸ್ವೀಕಾರ/ ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆ ನಡೆಯಲಿದ್ದು, ಕರ್ನಾಟಕ ರಾಜ್ಯ ಲೋಕಾಯುಕ್ತದ ಉಪಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿ ಕೆ.ಎನ್. ಫಣೇಂದ್ರ ಹಾಗೂ ಗೌರವಾನ್ವಿತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಉದ್ಘಾಟಿಸುವರು.

        ನಂತರ ಸಂಜೆ ೫.೩೦ ರಿಂದ ೬.೩೦ ಗಂಟೆಯವರೆಗೆ ಸಾರ್ವಜನಿಕ ಆಡಳಿತದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಪಾತ್ರ ಮತ್ತು ಕರ್ನಾಟಕ ಲೋಕಾಯುಕ್ತ ಕಾಯ್ದೆ ೧೯೮೪ರ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ನಡೆಸಲಾಗುವುದು. 

        ಮರು ದಿನ ಅಕ್ಟೋಬರ್ ೧೯ರಂದು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧.೩೦ ಹಾಗೂ ಮ.೨.೩೦ ರಿಂದ ಸಂಜೆ ೫ ಗಂಟೆಯವರೆಗೆ ತುಮಕೂರು ಜಿಲ್ಲೆಯ ಬಾಕಿ ಇರುವ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆ ನಡೆಯಲಿದೆ.

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧ್ಯಕ್ಷತೆವಹಿಸುವರು. ಮುಖ್ಯ ಅತಿಥಿಗಳಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಜಯಂತ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಸೇರಿದಂತೆ ಕರ್ನಾಟಕ ಲೋಕಾಯುಕ್ತ ಕಚೇರಿಯ ವಿವಿಧ ಅಧಿಕಾರಿಗಳು ಭಾಗವಹಿಸುವರು.

 

- Advertisement -  - Advertisement -  - Advertisement - 
Share This Article
error: Content is protected !!
";