ಚಂದ್ರವಳ್ಳಿ ನ್ಯೂಸ್, ಮೈಸೂರು:
ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಆದರೂ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟು ಟವೆಲ್ ಅನ್ನು ಕಾಂಗ್ರೆಸ್ ನ ಹಿರಿಯ ನಾಯಕ, ಮಾಜಿ ಸಚಿವ ಆರ್ ವಿ ದೇಶಪಾಂಡೆ ಹಾಕಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮುಡಾ ವಿಚಾರದಲ್ಲಿ ತಪ್ಪೇ ಮಾಡಿಲ್ಲ ಎಂದ ದೇಶಪಾಂಡೆ, ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನೇ ಸಿಎಂ ಆಗುವೆ ಎಂಬ ಅಚ್ಚರಿಯ ಹೇಳಿಕೆ ನೀಡುವ ಮೂಲಕ ಸಿಎಂ ಬದಲಾವಣೆ ಸಾಧ್ಯತೆಗೆ ರೆಕ್ಕೆಪುಕ್ಕ ಬರುವಂತೆ ಮಾಡಿದ್ದಾರೆ.
ಫೋನ್ ಟ್ಯಾಪಿಂಗ್‌ಆರೋಪ ಬಂದಾತಕ್ಷಣ ರಾಮಕೃಷ್ಣ ಹೆಗೆಡೆ ರಾಜೀನಾಮೆ ನೀಡಿದ್ದರು. ಈಗ ದಿನ ಫೋನ್ ಟ್ಯಾಪ್ ನಡೀತಾ ಇದೆ, ಆದರೆ ಮೌಲ್ಯಾಧಾರಿತ ರಾಜಕಾರಣ ಈಗ ನಡೆಯುತ್ತಿಲ್ಲ. ಹಿಂದೆ ಮೌಲ್ಯಾಧಾರಿತ ರಾಜಕಾರಣ ಮಾಡುತ್ತಿದ್ದರು, ಅದೇ ರೀತಿ ನಡೆದುಕೊಳ್ಳುತ್ತಿದ್ದರು. ಮುಡಾ ವಿಚಾರದಲ್ಲಿ ಸಿಎಂ ಏನು ತಪ್ಪು ಮಾಡಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಹಗರಣ ಅಂಥ ಹೇಳುತ್ತಿದ್ದಾರೆ. ಆರೋಪದ ಬಗ್ಗೆ ದಾಖಲೆ ಕೊಡಿ ನಾನೇ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದರು. ಅಷ್ಟಕ್ಕೇ ಸುಮ್ಮನಾಗದೆ ಸಿದ್ದರಾಮಯ್ಯನವರ ವಿರುದ್ಧ ತನಿಖೆಗೆ ಅನುಮತಿ ಕೊಟ್ಟರೆ ನಾನೇ ಸಿಎಂ ಆಗುತ್ತೇನೆ ಎಂದು ತಾನು ಕೂಡ ಸಿಎಂ ಹುದ್ದೆಯ ಆಕಾಂಕ್ಷಿ ಎಂದು ಹೇಳಿದರು.
ನಾನು ಸಚಿವ ಆಗಿ ದಣಿದಿದ್ದೇನೆ. ಇನ್ನೇನಿದ್ದರು ಮುಖ್ಯಮಂತ್ರಿ ಆಗಬೇಕು ಅಷ್ಟೆ. ಆದರೆ ಈಗ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದರು. ಹಾಗಾದರೆ ಸಿಎಂ ಆಗುವ ಆಸೆ ಇದ್ಯಾ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ದೇಶಪಾಂಡೆ, ನನಗೆ ಆಸೆ ಇದೆ, ನಿಮ್ಮಂತ ಜನರಿಗೂ ಆಸೆ ಇದೆ. ಜೀವನದಲ್ಲಿ ಮಹತ್ವಕಾಂಕ್ಷೆ ಇರಬೇಕು. ನಾನು ಸಿದ್ದರಾಮಯ್ಯಗಿಂತ ಎರಡು ವರ್ಷ ವಯಸ್ಸಿನಲ್ಲಿ ದೊಡ್ಡವನು. ಹೈಕಮಾಂಡ್ ಅವಕಾಶ ಕೊಟ್ಟರೂ ಕೂಡ, ಸಿದ್ದರಾಮಯ್ಯ ಅನುಮತಿ ಕೊಡಬೇಕು. ನಾನು ಸಿದ್ದರಾಮಯ್ಯಗೆ ಒಳ್ಳೆಯ ಸ್ನೇಹಿತ, 5 ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಇರುತ್ತಾರೆ. ಸದ್ಯ ಸಿಎಂ ಬದಲಾವಣೆ ಕುರಿತು ನನಗೆ ಗೊತ್ತಿಲ್ಲದೆ ಯಾವ ಚರ್ಚೆ ನಡೆಯಲು ಸಾಧ್ಯ ಇಲ್ಲ. ಪರಮೇಶ್ವರ್ ಹಾಗೂ ಜಾರಕಿಹೊಳಿ ಮನೆಯಲ್ಲಿ ನಡೆದಿರುವುದು ಇಲಾಖೆಗೆ ಸಂಬಂಧಪಟ್ಟ ಸಭೆ ಅಷ್ಟೆ ಎಂದು ಸ್ಪಷ್ಟಪಡಿಸಿದರು.
ಆರ್ಥಿಕ ಹೊರೆ: ಸರ್ಕಾರಕ್ಕೆ ಗ್ಯಾರಂಟಿ ಯೋಜನೆಯಿಂದ ಆರ್ಥಿಕ ಹೊರೆ ಬಿದ್ದಿರುವುದು ನಿಜ. ಗ್ಯಾರಂಟಿ ಯೋಜನೆಗೆ 50 ರಿಂದ 60ಸಾವಿರ ಕೋಟಿ ರೂಪಾಯಿ ಬೇಕಾಗಿದೆ. ತೊಂದರೆಯಾಗಿರುವುದನ್ನು ಸರಿದೂಗಿಸುತ್ತಿದ್ದಾರೆ. ಆದರೆ ಬೆಲೆ ಏರಿಕೆಗೆ ಕಾರಣ ಇದಲ್ಲ. ದೇಶದಲ್ಲೇ ಬೆಲೆ ಏರಿಕೆ ಆಗಿದೆ. ಇದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದರು.