ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಆಸ್ಪತ್ರೆಯಲ್ಲಿ 8 ವರ್ಷದ ಮಗುವಿಗೆ ಹೆಚ್ಎಂಪಿವಿ ವೈರಸ್ ಸೋಂಕಿಗೆ ಒಳಗಾಗಿರುವುದನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಖಚಿತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಹೆಚ್ಎಂಪಿವಿ ವೈರಸ್ ಮೊದಲಿನಿಂದಲೂ ಸಕ್ರಿಯವಾಗಿದೆ ಮತ್ತು ನಿರ್ದಿಷ್ಟ ಶೇಕಡಾವಾರು ಜನರು ಈ ವೈರಸ್‌ನಿಂದ ಪ್ರಭಾವಿತರಾಗಿದ್ದಾರೆ. ಇದು ಹೊಸದೇನಲ್ಲ.
ವೈರಸ್ ಕಂಡುಬಂದ ಮಗುವಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಮಗುವಿನ ಪೋಷಕರು ಸ್ಥಳೀಯ ಜನರಾಗಿದ್ದಾರೆ. ಅವರು ಚೀನಾ ಅಥವಾ ಮಲೇಷ್ಯಾದಿಂದ ಬಂದಿಲ್ಲ ಎಂದು ಸಚಿವರು ತಿಳಿಸಿದರು.
ಚೀನಾದಲ್ಲಿ ಹರಡಿರುವ ವೈರಸ್ ಗೂ ಭಾರತದಲ್ಲಿ ಪತ್ತೆಯಾದ ವೈರಸ್ ನಡುವೆ ಸಂಬಂಧವಿದೆಯೇ ಎಂಬುದನ್ನು ನಿರಾಕರಿಸಿದ ಸಚಿವರು, ಹೆಚ್ಎಂಪಿವಿಯ ಹೊಸ ರೂಪಾಂತರದಿಂದಾಗಿ ಚೀನಾದಲ್ಲಿ ಏಕಾಏಕಿ ಸೋಂಕು ಕಂಡುಬಂದಿದೆ. ಅದರ ಬಗ್ಗೆ ನಮಗೆ ಇನ್ನೂ ಯಾವುದೇ ವಿವರಗಳಿಲ್ಲ.
ಆದರೆ ಹೆಚ್ಎಂಪಿವಿ ಬಹಳ ಹಿಂದಿನಿಂದಲೂ ಇದೆ. ಇದು ಶೀತ, ಕೆಮ್ಮು ಮತ್ತು ಜ್ವರದಂತಹ ಸಾಮಾನ್ಯ ಲಕ್ಷಣಗಳನ್ನು ಉಂಟುಮಾಡುತ್ತದೆ. ಇದು ಸೀಮಿತ ಸಮಯದ ವೈರಸ್ ಆಗಿದ್ದು, ಸ್ವಲ್ಪ ದಿನಗಳಲ್ಲೇ ಕಡಿಮೆ ಆಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.