ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇವದಾಸಿ
——————-
ಅಳುವ ಕಂದನಿಗೆ
ಹಾಲುಣಿಸಿ ತಟ್ಟಿ ಮಲಗಿಸುವಾಗ
ನೆನಪುಗಳೊಂದಿಗೆ
ಕುಳಿತಿರಬೇಕಲ್ಲವೇ
ನೋವುಗಳಲಿ
ಹೂವಂತ ನಗು ಹಾಸಿ
ಮಂಚಕ್ಕೊರಗಿದಾಗ
ಕ್ಷಣ ಕ್ಷಣ ಮುತ್ತುವ ಭಾವನೆಗಳು
ಕೆಣಕುತ್ತಿರಬೇಕಲ್ಲವೇ
ನಲುಗಿದೆದೆಯಲಿ
ಕಾಮನಿಗೆ ಮೈ ಹಾಸಿ
ನೆತ್ತಿಯ ಸೂರ್ಯನ ಉರಿಗೆ
ಮುಲುಕುವಾಗ
ಕನಸುಗಳೊಳಗೆ
ಮುನಿಸಿಕೊಂಡಿರಬೇಕಲ್ಲವೇ
ಬಾಚಿ ತಬ್ಬಿ ತೃಷೆ ತೀರಿಸಿ
ಎಸೆದ ನೋಟುಗಳ ಲವಲವಿಕೆಯಲಿ
ನವಿರಾದ ನಗು ಚೆಲ್ಲಿರಬೇಕಲ್ಲವೇ
ಹಸಿದ ದೈತ್ಯನ ನೃತ್ಯಕ್ಕೆ
ಕುಣಿವ ಗೆಜ್ಜೆ ಸದ್ದುಗಳಲಿ
ಸುಶ್ರಾವ್ಯ ಸುಧೆಯು
ಹೊಮ್ಮಿರಬೇಕಲ್ಲವೇ
ಮತ್ತೆ ಬರುವವಗೆ
ಸಿಂಗರಿಸಿ ಹೊರ ಬರುವಾಗ
ನಿತ್ಯ ಕನ್ಯೆಯಂತೆ ಕಳೆಯಾಗಿ
ಸ್ವಾಗತಿಸಬೇಕಲ್ಲವೇ
ವಾಸ್ತವಕ್ಕೆ ತೆರೆದಾಗ
ಉಮ್ಮಳಿಸಿ ಬಿಕ್ಕಿರಬೇಕಲ್ಲವೇ
ಊರ ಸೆರಗಿಗೆ ಕಟ್ಟಿದ ಮುತ್ತುಗಳು
ಮುತ್ತೈದೆ ಅಗಲದ ಹಣೆಗಳು
ಮುಡಿ ಬಾಡದ ಹೂಗಳು
ಪುರಾಣದ ಕುಂತಿ ಅಲ್ಲವೇ ಅಲ್ಲ
ಹಸಿದ ಹೊತ್ತಿಗೆ ಅನ್ನಕ್ಕಾದ ಕಥೆಗಳು
ಕವಿತೆ:ಕುಮಾರ್ ಬಡಪ್ಪ, ಚಿತ್ರದುರ್ಗ.