ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಪ್ರಧಾನಿಗಳಾದ ಹೆಚ್.ಡಿ ದೇವೇಗೌಡ ಅವರು, ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರೊಂದಿಗೆ ದೆಹಲಿಯಲ್ಲಿ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಹಾಸನದಲ್ಲಿ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಅನುಮೋದನೆ ಕೋರಿ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ದೇವೇಗೌಡ ಅವರು, ಹಾಸನ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಹಾಗೂ ಕರಾವಳಿ ಮತ್ತು ಒಳನಾಡು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದೆ. ಆರ್ಥಿಕ ಬೆಳವಣಿಗೆ ಮತ್ತು ನಗರ ವಿಸ್ತರಣೆಯಿಂದಾಗಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಹೀಗಾಗಿ ಹೊರ ವರ್ತುಲ ರಸ್ತೆ ಅಗತ್ಯವಾಗಿದೆ. ಈ ಯೋಜನೆಯು ಸಂಚಾರವನ್ನು ವಿಕೇಂದ್ರೀಕರಿಸಿ ದಟ್ಟಣೆ ಕಡಿಮೆ ಮಾಡುತ್ತದೆ ಹಾಗೂ ಪ್ರಮುಖ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಗೆ ಸಂಪರ್ಕ ಒದಗಿಸುತ್ತದೆ ಎಂದು ಗಡ್ಕರಿ ಅವರಿಗೆ ಮನವರಿಕೆ ಮಾಡಿಕೊಟ್ಟರು.
ಪ್ರಸ್ತಾವಿತ ಹಾಸನ ಹೊರ ವರ್ತುಲ ರಸ್ತೆಯು ಬೆಂಗಳೂರು-ನೆಲಮಂಗಲ-ಮಂಗಳೂರು ರಸ್ತೆ (NH-75)ಅನ್ನು ಹಾಸನ ವಿಮಾನ ನಿಲ್ದಾಣ, ಹಾಸನ-ಅರಸೀಕೆರೆ ರಸ್ತೆ (SH-71), ಹಾಸನ-ಹಳೇಬೀಡು-ಹಾಸನ ರಸ್ತೆ ಮತ್ತು ಹಾಸನ-ಬೇಲೂರು ರಸ್ತೆ (NH-373) ಗೆ ಸಂಪರ್ಕಿಸುತ್ತದೆ.
ಅಲ್ಲದೆ, ಹಾಸನ ಜಿಲ್ಲೆಯಲ್ಲಿರುವ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳು ಮತ್ತು ರಾಷ್ಟ್ರೀಯ ಪ್ರವಾಸಿ ಸರ್ಕ್ಯೂಟ್ ನ ಭಾಗವಾಗಿರುವ ಹಾಸನ, ಬೇಲೂರು, ಹಳೇಬೀಡು, ಚಿಕ್ಕಮಗಳೂರು, ಶ್ರವಣಬೆಳಗೊಳ, ಮೈಸೂರು, ಮಡಿಕೇರಿ ಮತ್ತು ಮಂಗಳೂರಿನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ದೇವೇಗೌಡರು ಕೇಂದ್ರ ಸಾರಿಗೆ ಸಚಿವರಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರುಗಳಾದ ಹೆಚ್ ಡಿ ರೇವಣ್ಣ, ಎ. ಮಂಜು ಹಾಗೂ ಕೋಲಾರ ಸಂಸದರಾದ ಮಲ್ಲೇಶ್ ಬಾಬು ಅವರು ಜೊತೆಯಲ್ಲಿದ್ದರು.