ಚಂದ್ರವಳ್ಳಿ ನ್ಯೂಸ್, ರಾಯಚೂರು:
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕರ್ನಾಟಕದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕೆಂಬ ಆಶಯವಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಗಂಭೀರ ಆರೋಪ ಮಾಡಿದರು.
ರಾಚೂರು ಜಿಲ್ಲೆಯ ದೇವದುರ್ಗ ಪಟ್ಟಣ ಬಸವ ಕಾಲೇಜು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಹಾಗೂ ಅಭಿನಂದನಾ ಸಮಾರಂಭ ಮತ್ತು ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ದೇವೇಗೌಡರು ಮಾತನಾಡಿದರು.
ನಾನು ಜಾತಿ ಆಧಾರದ ಮೇಲೆ ಕೆಲಸ ಮಾಡಿಲ್ಲ. ಪುತ್ಥಳಿ ಬಗ್ಗೆ ನನಗೆ ವ್ಯಾಮೋಹವಿಲ್ಲ. ಅದನ್ನೇ ಜವಾಬ್ದಾರಿ ಅನ್ನೋದು. ಕರ್ನಾಟಕದ ಅಭಿವೃದ್ಧಿಗೆ ಏನು ಮಾಡಬೇಕು ಎಂದು ಕೆಲ ನಿರ್ಣಯಗಳನ್ನು ಮಾಡಿದ್ದೇನೆ. ಹೆಚ್.ಡಿ.ಕುಮಾರಸ್ವಾಮಿಗೆ ಅದನ್ನು ಹೇಳಿದ್ದೇನೆ. ಆದರೆ ಇಲ್ಲಿನ ಕಾಂಗ್ರೆಸ್ ಸರ್ಕಾರ ಸಹಕಾರ ಕೊಡಲ್ಲ ಎಂದು ಗೌಡರು ದೂರಿದರು.
ಜಿಲ್ಲೆಯ ಜನರಿಗೆ ಸಾಕಷ್ಟು ವಿಷಯಗಳ ಪರಿಚಯವಿಲ್ಲ. ಇಡೀ ರಾಜ್ಯದಲ್ಲಿ ಕುಮಾರಸ್ವಾಮಿ ಕೆಲಸ ಮಾಡಲು ಉತ್ಸುಕತೆಯಲ್ಲಿದ್ದಾರೆ. ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆಯನ್ನು ಕುಮಾರಸ್ವಾಮಿಗೆ ಪ್ರಧಾನಿ ಮೋದಿ ನೀಡಿದ್ದಾರೆ. ಸಂಸ್ಥೆಗಳು ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳಬೇಕು ಅಂತ ಜವಾಬ್ದಾರಿ ಕೊಟ್ಟಿದ್ದಾರೆ. ದೇವೇಗೌಡರಿಗೆ 93 ವಯಸ್ಸು. ನಮ್ಮ ಮುಖಂಡರು ಪುತ್ಥಳಿ ಮಾಡಿಸಿದ್ದಾರೆ. ಅದರ ಉದ್ಘಾಟನೆಗೆ ಬಂದಿದ್ದೇನೆ ಅಂದುಕೊಳ್ಳಬೇಡಿ. ನಿಮ್ಮನ್ನು ನೋಡಲು ಬಂದಿದ್ದೇನೆ ಎಂದು ಗೌಡರು ಭಾವುಕರಾದರು.
ಸಾಮಾನ್ಯ ರಾಜಕಾರಣಿ: ನಾನು ಎಂದೂ ದೊಡ್ಡ ವ್ಯಕ್ತಿ ಅಂತ ಹೇಳಿಕೊಳ್ಳಲ್ಲ. ದೇವದುರ್ಗಕ್ಕೆ ನೀರು ಕೊಟ್ಟ ವಿಷಯದಲ್ಲಿ ನಮ್ಮ ಜನ ಇನ್ನೂ ಸಂತೃಪ್ತವಾಗಿಲ್ಲ. ರಾಜ್ಯಸಭೆಯಲ್ಲಿ ನನಗೆ ಇನ್ನೂ ಒಂದು ವರ್ಷ ಅಧಿಕಾರಾವಧಿ ಇದೆ. ನಮ್ಮ ಶಾಸಕಿ ಜಿ.ಕರೆಮ್ಮ ನಾಯಕ ಕೆಲಸಗಳ ಲಿಸ್ಟ್ ಮಾಡಿ ಇಟ್ಟುಕೊಂಡಿದ್ದಾರೆ.
ಈ ಪಕ್ಷ ನಮ್ಮ ಕುಟುಂಬದ ಪಕ್ಷವಲ್ಲ, ಇದು ನಿಮ್ಮ ಪಕ್ಷ. ಈ ಪಕ್ಷವನ್ನು ನೀವು ಉಳಿಸಿ ಬೆಳೆಸಬೇಕು. ನಾನು ಈ ದೇಶದಲ್ಲಿ ಆಡಳಿತ ಮಾಡುವ ವ್ಯಕ್ತಿಯನ್ನು ಟೀಕಿಸಲ್ಲ. 13 ತಿಂಗಳು ನಾನು ಬೇಡ ಅಂದ್ರೂ ಕಾಂಗ್ರೆಸ್‌ನವರು ಅಧಿಕಾರ ಕೊಟ್ಟಿದ್ದರು. ಸಿಎಂ ಆಗಿ ಕುಮಾರಸ್ವಾಮಿ 28 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದರು ಎಂದು ದೇವೇಗೌಡರು ನೆನೆದರು.
ದೇವೇಗೌಡರು ಭಾಷಣ ಮಾಡುವ ಸಂದರ್ಭದಲ್ಲಿ ಮೈಕ್ ಸಮಸ್ಯೆ ಉಂಟಾಗಿ ಕ್ಷಮೆ ಕೇಳಿದ ಕಾರ್ಯಕರ್ತನಿಗೆ, ನೀನು ಕ್ಷಮೆ ಕೇಳೋದಲ್ಲ, ನಾನು ಮೈಕಿಗೆ ಕ್ಷಮೆ ಹೇಳಬೇಕು. ಮುದುಕನಾಗಿದ್ರೂ ಹೀಗೆ ಮಾತನಾಡುತ್ತಾನಲ್ಲಾ ಅಂತ ಬಂದ್ ಆಗುತ್ತಿದೆ ಎಂದು ನಗೆ ಚಟಾಕಿ ಹಾರಿಸಿದರು.

ದೇವದುರ್ಗ ತಾಲೂಕಿನ ಮಿಯಾಪುರ ಕ್ರಾಸ್ನಲ್ಲಿ ಪುತ್ಥಳಿ ನಿರ್ಮಿಸಲಾದ 6.5 ಅಡಿಯ ತಮ್ಮ ಪುತ್ಥಳಿಯನ್ನು ತಾವೇ ಅನಾವರಣಗೊಳಿಸಿದರು. 25 ಲಕ್ಷ ವೆಚ್ಚದಲ್ಲಿ 1 ಒಂದು ಗುಂಟೆ ಜಾಗದಲ್ಲಿ 6.5 ಅಡಿ ಎತ್ತರದಲ್ಲಿ ಮಲ್ಲಣ್ಣ ನಾಗರಾಳ್ ಸಾಹುಕಾರ್ ಎಂಬ ರೈತನಿಂದ ಪುತ್ಥಳಿ ನಿರ್ಮಾಣವಾಗಿರುವುದು ವಿಶೇಷವಾಗಿದೆ.

