ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಪ್ರಧಾನಮಂತ್ರಿ ಹೆಚ್.ಡಿ ದೇವೇಗೌಡ ಅವರು ಸಂಕಷ್ಟದಲ್ಲಿರುವ ರಾಜ್ಯದ ಮಾವು ಬೆಳೆಗಾರರ ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರ ಕೂಡಲೇ ಮಧ್ಯೆ ಪ್ರವೇಶಿಸಬೇಕು ಎಂದು ಮನವಿ ಮಾಡಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಚೌಹಾಣ್ ಅವರಿಗೆ ಈ ಕುರಿತು ಪ್ರತ್ಯೇಕ ಪತ್ರ ಬರೆದು ಒತ್ತಾಯಿಸಿದ್ದಾರೆ.
ತೋಟಗಾರಿಕೆ ಬೆಳೆಯಾಗಿರುವ ಮಾವು ಬೆಳೆಯುವುದರಲ್ಲಿ ಕರ್ನಾಟಕ ಮುಂಚೂಣಿ ರಾಜ್ಯವಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಮಾವು ಬೆಲೆ ಕುಸಿತ ಹಾಗೂ ರಾಜ್ಯದ ತೋತಾಪುರಿ ಮಾವಿಗೆ ಆಂಧ್ರದಲ್ಲಿ ನಿಷೇಧದ ಹಿನ್ನೆಲೆಯಲ್ಲಿ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೇವೇಗೌಡರು ತಿಳಿಸಿ ಹೇಳಿದ್ದಾರೆ.
ಮಾರುಕಟ್ಟೆಯಲ್ಲಿ ಮಧ್ಯಪ್ರವೇಶ ಯೋಜನೆಯಡಿ ದರ ಕೊರತೆ ಪಾವತಿ ಕಾರ್ಯಕ್ರಮವನ್ನು ತುರ್ತಾಗಿ ಅನುಷ್ಠಾನಗೊಳಿಸಿ, ಕೇಂದ್ರದ ಸಂಸ್ಥೆಗಳಾದ ನಾಫೆಡ್ ಮತ್ತು ಎನ್ಸಿಸಿಎಫ್ಗೆ ಮಾವು ಖರೀದಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿ, ತಕ್ಷಣ ರೈತರಿಗೆ ನೆರವಾಗಬೇಕು ಎಂದು ಹೆಚ್.ಡಿ.ದೇವೇಗೌಡರು ಮನವಿ ಮಾಡಿದ್ದಾರೆ.

