ನೀರಿನ ಹೆಜ್ಜೆ ಕೃತಿಯಲ್ಲಿ ದೇವೇಗೌಡರ ಹೊಗಳಿಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾನು ರಚಿಸಿದ “ನೀರಿನ ಹೆಜ್ಜೆ” ಕೃತಿಯಲ್ಲಿ ಬಹಳಷ್ಟು ವಿಚಾರಗಳನ್ನು ಆಳವಾದ ಸಂಶೋಧನೆಯ ಮೂಲಕ ಬರೆಯಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ
, “ನೀರಿನ ಹೆಜ್ಜೆ” ಕೃತಿಯ ಲೋಕಾರ್ಪಣೆ ಸಂದರ್ಭದಲ್ಲಿ ಅವರು ಮಾತನಾಡಿದರು.

ನೀರು ನೀಲಿ ಬಂಗಾರಕ್ಕೆ ಸಮಾನ. ಈ ಕೃತಿಯಲ್ಲಿ ನೀರಿನ ಕುರಿತಾದ ಅಂತಾರಾಷ್ಟ್ರೀಯ ಒಪ್ಪಂದಗಳು, ನಮ್ಮ ರಾಜ್ಯದ ಎಲ್ಲಾ ಪ್ರಮುಖ ನದಿಗಳ ವಿಚಾರಗಳು, ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಜಲ ವಿವಾದಗಳ ಸಂಬಂಧ ತೆಗೆದುಕೊಂಡ ಮಹತ್ವದ ನಿರ್ಧಾರಗಳ ಬಗ್ಗೆ ದಾಖಲಿಸಲಾಗಿದೆ. ಅವರು ಪ್ರಧಾನಿಯಾಗಿದ್ದಾಗ ಕೈಗೊಂಡ ಅಂತರಾಷ್ಟ್ರೀಯ ನೀರಾವರಿ ತೀರ್ಮಾನಗಳಿಗಾಗಿ ನಾನು ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

- Advertisement - 

ಹಿಂದೆ, ವಿಧಾನಸೌಧದಲ್ಲಿ ನಂಜೇಗೌಡ ಅವರು ನೀರಿನ ವಿಚಾರವಾಗಿ ಮಾತನಾಡಿದ್ದನ್ನು ನಾನು ಕೇಳಿದ್ದೇನೆ ಮತ್ತು ಈ ಕುರಿತು ಚರ್ಚೆಯನ್ನೂ ನಡೆಸಿದ್ದೇನೆ. ಈ ನೀರಾವರಿ ವಿವಾದಗಳು ಇವತ್ತಿನದ್ದಲ್ಲ, ಇವು ಹಿಂದಿನ ಕಾಲದಿಂದಲೂ ಬಂದಿರುವ ವಿವಾದಗಳು. ಪುರಾಣಗಳಲ್ಲಿಯೂ ಸಹ ನಾವು ನೀರಿನ ವಿಚಾರದಲ್ಲಿ ವಿವಾದಗಳಿದ್ದ ಬಗ್ಗೆ ಗಮನಿಸಬಹುದಾಗಿದೆ ಎಂದು ಡಿಸಿಎಂ ತಿಳಿಸಿದರು.

ಲೋಕಸಭೆಯ ವಿಪಕ್ಷ ನಾಯಕರಾದ ರಾಹುಲ್‌ಗಾಂಧಿಯವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ನೀರಾವರಿ ಇಲಾಖೆಯ ಜವಾಬ್ದಾರಿಯನ್ನು ನನಗೆ ವಹಿಸಿಕೊಟ್ಟಿದ್ದಾರೆ. ನೆನಪಿಡಿ, ನೀರಿಗೆ ಬಣ್ಣವಿಲ್ಲ, ಜಾತಿ ಇಲ್ಲ, ಧರ್ಮ ಇಲ್ಲ. ನಮ್ಮ ಜೀವವೇ ಜಲ ಜೀವ. ನನಗೆ ಸಿಕ್ಕ ಈ ಅವಧಿಯಲ್ಲಿ ರಾಜ್ಯದ ನೀರಾವರಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿ, ರೈತನ ಬದುಕನ್ನು ಹಸನುಗೊಳಿಸುವುದೇ ನನ್ನ ಗುರಿ ಎಂದು ಡಿಸಿಎಂ ಶಪತ ಮಾಡಿದರು.

- Advertisement - 

ಕಾವೇರಿ ಆರತಿ ವಿಚಾರದಲ್ಲಿ ಕೆಲವರು ಟೀಕೆಗಳನ್ನು ಮಾಡಿದರು. ನಾನು ಹೇಳುವುದಿಷ್ಟೇ, ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಕೊಂಡು, ನಾಡಿನಲ್ಲಿ ನೀರಾವರಿ ಅಭಿವೃದ್ಧಿಗಾಗಿ ನನ್ನ ಕೈಯಿಂದ ಸಾಧ್ಯವಾದಷ್ಟು ಪ್ರಯತ್ನವನ್ನು ಮಾಡುತ್ತಿದ್ದೇನೆ. ಮೇಕೆದಾಟು ವಿಚಾರದಲ್ಲಿ ನಾವು ಮಾಡಿದ ಪಾದಯಾತ್ರೆಯಿಂದ ಹಿಡಿದು ಕಾನೂನು ಹೋರಾಟದವರೆಗೆ ಮಾಡಿದ ಶ್ರಮದ ಫಲವೇ ನಿನ್ನೆ ಸುಪ್ರೀಂ ಕೋರ್ಟ್‌ನೀಡಿದ ತೀರ್ಪು. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದ್ದೇ ಇದೆ ಎಂದು ಡಿಸಿಎಂ ಅಭಿಪ್ರಾಯಪಟ್ಟರು.

ದುರದೃಷ್ಟವಶಾತ್, ರಾಜ್ಯದ ನೀರಾವರಿ ಅಭಿವೃದ್ಧಿಗೋಸ್ಕರ ಬಿಜೆಪಿ ಸಂಸದರು ಕೇಂದ್ರದಲ್ಲಿ ಧ್ವನಿ ಎತ್ತುತ್ತಿಲ್ಲ. ಕೇವಲ ರಾಜ್ಯ ಸರ್ಕಾರವನ್ನು ಟೀಕೆ ಮಾಡುವುದೇ ಅವರ ಕೆಲಸ ಆಗಿದೆ ಎಂದು ಶಿವಕುಮಾರ್ ದೂರಿದರು.

334 ಪುಟಗಳ “ನೀರಿನ ಹೆಜ್ಜೆ” ಕೃತಿಯು ರಾಜ್ಯದ ಪ್ರಮುಖ ನದಿಗಳು, ಅವುಗಳ ವಿವಾದಗಳು, ಬೃಹತ್‌ನೀರಾವರಿ ಯೋಜನೆಗಳು ಮತ್ತು ಅವುಗಳು ಎದುರಿಸುತ್ತಿರುವ ಸವಾಲುಗಳು, ರಾಜ್ಯ-ದೇಶ-ಅಂತಾರಾಷ್ಟ್ರೀಯ ನದಿ ವಿವಾದಗಳು, ಕಾನೂನು ಹೋರಾಟ, ಮಸೂದೆಗಳು ಮತ್ತು ಭವಿಷ್ಯದ ಕನಸುಗಳ ಕುರಿತು ಸಮಗ್ರ ಮಾಹಿತಿ ಒಳಗೊಂಡಿದೆ.

ನಾವು ನೀರನ್ನು ಮಾತೆಯ ರೂಪದಲ್ಲಿ ಅತ್ಯಂತ ಪೂಜ್ಯ ಭಾವನೆಯಿಂದ ಆರಾಧಿಸುವ ಹಿನ್ನೆಲೆಯಲ್ಲಿ, ಈ ಕೃತಿಯು ಜಲಸಂಪನ್ಮೂಲಗಳ ಮಹತ್ವವನ್ನು ಎತ್ತಿಹಿಡಿಯುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ “ನೀರಿನ ಹೆಜ್ಜೆ” ಕೃತಿ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅನೇಕ ಸಚಿವರು ಮತ್ತು ಶಾಸಕರು ಉಪಸ್ಥಿತರಿದ್ದರು.

 

Share This Article
error: Content is protected !!
";