ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ ಪ್ರಮುಖ ಐತಿಹಾಸಿಕ ಶಕ್ತಿದೇವತೆ ಹಿರೇಗುಂಟನೂರು ಗ್ರಾಮದ ಶ್ರೀ ದ್ಯಾಮಲಾಂಬ ದೇವಿ ರಥೋತ್ಸವವು ಗುರುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು.
ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮದ ಶಕ್ತಿದೇವತೆ ಸುರಸುಂದರಿ ಶ್ರೀ ದ್ಯಾಮಲಾಂಬ ದೇವಿಯ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಅದ್ದೂರಿಯಾಗಿ ಜರುಗಿತು. ಭಕ್ತರು ತೇರು ಎಳೆಯುವ ಮೂಲಕ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದರು.
ರಾತ್ರಿ ಜರುಗಿದ ದೇವಿಯ ಮಹಾರಥೋತ್ಸವಕ್ಕೆ ನಗರ ಸೇರಿ ತಾಲೂಕಿನ ಹಲವೆಡೆಗಳಿಂದ ಭಕ್ತರ ದಂಡೆ ಹರಿದು ಬಂದಿತ್ತು. ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ಅಲ್ಲಿವರೆಗೆ ಕಾತರದಿಂದ ಕಾಯುತ್ತ ನಿಂತಿದ್ದ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.
ರಥೋತ್ಸವಕ್ಕೂ ಮುನ್ನ ವಿವಿಧ ಹೂಗಳಿಂದ ದೇವಿ ಮತ್ತು ರಥವನ್ನು ಅಲಂಕರಿಸಲಾಗಿತ್ತು. ಉತ್ಸವ ಮೂರ್ತಿಯನ್ನು ಉರುಮೆ, ತಮಟೆ, ನಗಾರಿ ಮತ್ತಿತರ ವಾದ್ಯಗಳೊಂದಿಗೆ ರಥದ ಬಳಿಗೆ ಕರೆತಂದು ಮೂರು ಬಾರಿ ಪ್ರದಕ್ಷಿಣೆ ಹಾಕಿಸಲಾಯಿತು. ನಂತರ ರಥದೊಳಗೆ ಪ್ರತಿಷ್ಠಾಪಿಸಲಾಯಿತು. ದೇವಿಗೆ ಎಡೆ ಸಮರ್ಪಿಸಿದ ನಂತರ ರಥ ಎಳೆಯಲು ಅನುವು ಮಾಡಿಕೊಡಲಾಯಿತು.
ದೇಗುಲಕ್ಕೂ ಭೇಟಿ ನೀಡಿದ ಭಕ್ತರು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಮಹಾಮಂಗಳಾರತಿ, ತೀರ್ಥ, ಪ್ರಸಾದ ಸ್ವೀಕರಿಸಿ ದೇವಿಯ ಮೂರ್ತಿ ಕಣ್ತುಂಬಿಕೊಂಡರು. ಅಲ್ಲದೆ, ವೀರಭದ್ರೇಶ್ವರ ಸ್ವಾಮಿಗೂ ವಿಶೇಷ ಅಲಂಕಾರ ಸೇವೆ ನಡೆಯಿತು.
ಇಂದು ಸಿಡಿ ಉತ್ಸವ- ಏ.18 ರಂದು ಶುಕ್ರವಾರ ಸಂಜೆ 5 ಗಂಟೆಗೆ ಸಿಡಿ ಉತ್ಸವ ಪೂಜಾ ಕಾರ್ಯಕ್ರಮ ಮತ್ತು ಸಂಜೆ 6 ಗಂಟೆಗೆ ದೇವಿಯ ಹೂವಿನ ಪಲ್ಲಕ್ಕಿ ಉತ್ಸವ ಇರುತ್ತದೆ.
ಶ್ರೀ ದ್ಯಾಮಲಾಂಬ ದೇವಿ ಸಮಿತಿ ಟ್ರಸ್ಟ್ ಅಧ್ಯಕ್ಷರಾದ ಇ.ಚಂದ್ರಣ್ಣ, ಗೋವಿಂದರಾಜು ಬಿ.ಎಂ., ಜಿ.ಹೆಚ್. ವಸಂತಕುಮಾರ್, ಮುಜರಾಯಿ ಇಲಾಖೆ
ತಹಶೀಲ್ದಾರ್ ಸೇರಿದಂತೆ ಸಾವಿರಾರು ಭಕ್ತರು ನೆರೆದಿದ್ದರು.
ಇತಿಹಾಸ-ಜಿಲ್ಲೆಯ ಪ್ರಮುಖ ಐತಿಹಾಸಿಕ ಶಕ್ತಿದೇವತೆ ಹಿರೇಗುಂಟನೂರು ಗ್ರಾಮದ ಶ್ರೀ ದ್ಯಾಮಲಾಂಬ ದೇವತೆ ತಮ್ಮ ಪರಿವಾರದೊಂದಿಗೆ ಕ್ರಿ.ಶ 1431ರಲ್ಲಿ ದೆಹಲಿಯ ಮುಸ್ಲಿಂ ದೊರೆಗಳ ದಬ್ಬಾಳಿಕೆಗೆ ನಲುಗಿ ತಮ್ಮ ಪರಿವಾರ ಸಮೇತ ಆಗಮಿಸಿ ನೆಲೆಸಿರುವ ದೇವತೆ ಎನ್ನುವ ಪ್ರತೀತಿ ಇದೆ.
ಐತಿಹಾಸಿಕ ಪುರಾಣ-
ಉತ್ತರ ಭಾರತದ ರಾಜಧಾನಿ ದಿಲ್ಲಿಯಲ್ಲಿ ಒಕ್ಕಲು ಮನೆತನಕ್ಕೆ ಸೇರಿದ ಗೋವಿಂದಗೌಡರ ಪುತ್ರಿ ಚಂದನ ನಂದಿನಿ (ದ್ಯಾಮಲಾಂಬ) ಯೌವನಾವಸ್ಥೆಗೆ ಬಂದು ದಿಲ್ಲಿಯ ಸ್ನೇಹಿತರೊಟ್ಟಿಗೆ ಬೀದಿಯಲ್ಲಿ ಗೆಳತಿಯರೊಟ್ಟಿಗೆ ನಡೆದು ಹೋಗುತ್ತಿರುವ ಸಂದರ್ಭದಲ್ಲಿ ದಿಲ್ಲಿಯ ದೊರೆ ಬಾದಷಹನು ಕ್ರಿ.ಶ 1431ರಲ್ಲಿ ಕಳುಹಿಸಿ ಈಕೆಯನ್ನು ನನಗೆ ಲಗ್ನ(ಮದುವೆ) ಮಾಡಿಕೊಡು ಎಂದು ಸಂದೇಶ ಕಳುಹಿಸಿತ್ತಾನೆ.
ದಿಲ್ಲಿ ದೊರೆಯ ಆಮಂತ್ರಣವನ್ನು ಗಣನೆಗೆ ತೆಗೆದುಕೊಳ್ಳದ ಗೋವಿಂದಗೌಡನನ್ನು ಆಸ್ಥಾನಕ್ಕೆ ಕರೆಸಿ ತನ್ನ ಮನದಾಳದ ಮಾತು ಮತ್ತು ಪ್ರೇಮವನ್ನು ಪ್ರಸ್ತಾಪಿಸಿ ಅಪ್ರತಿ ಸುಂದರಿ ಚಂದನ ನಂದಿನಿ ಯನ್ನು ಯಾವ ಕ್ಷುದ್ರನಿಗೂ ಕೊಟ್ಟು ಮದುವೆ ಮಾಡದೆ ರಾಜ ಮನೆತನಕ್ಕೆ ಸೇರಿದ ನನಗೇ ಕೊಟ್ಟು ಧಾರೆ ಎರೆದುಕೊಡುವಂತೆ ಆಜ್ಞಾಪಿಸುತ್ತಾನೆ. ತಮ್ಮ ಆಜ್ಞೆ ಪಾಲಿಸದಿದ್ದರೆ ಸಾಮಂತ ಸ್ಥಾನದಿಂದ ಕೆಳಗಿಳಿದು ದಿಲ್ಲಿಯಿಂದ ನಿರ್ಗಮಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕುತ್ತಾನೆ.
ಈ ಘಟನೆಯಿಂದ ವಿಚಲಿತನಾದ ಗೋವಿಂದಗೌಡ ಚಂದನ ನಂದಿನಿಗಾಗಿ ಏನೂ ಬೇಕಾದರೂ ಮಾಡಲು ಸಿದ್ಧ ನಿದ್ದ ದೊರೆಯ ತೀರ್ಮಾನ ತಿಳಿದು ಇಡೀ ಪರಿವಾರದೊಂದಿಗೆ ದಕ್ಷಿಣ ಭಾರತ ಕಡೆ ಧಾವಿಸಿ ದಿಲ್ಲಿ ದೊರೆಯಿಂದ ಆಕೆಯನ್ನು ರಕ್ಷಿಸುತ್ತಾನೆ.
ದಕ್ಷಿಣ ಭಾರತ ಕಡೆ ಬರುವ ಸಂದರ್ಭದಲ್ಲಿ ತುಂಗಾ ಭದ್ರಾ ನದಿ, ಹಗರಿ ನದಿಗಳಿಂದ ನೆರೆ ಹೆಚ್ಚಾಗಿ ನದಿ ದಾಟಲು ಕಷ್ಟವಾಗುತ್ತದೆ. ಆಗ ದೈವ ಸ್ವರೂಪಿಣಿಯಾದ ಚಂದನ ನಂದಿನಿ ಗಂಗಾದೇವಿಯನ್ನು ಪ್ರಾರ್ಥಿಸಿದಾಗ ನೆರೆ ಹಾವಳಿ ತಗ್ಗುತ್ತದೆ. ಆಗ ತುಂಗಾ ಭದ್ರ ದಂಡೆಯಿಂದ ಗೂಟದೂರು (ಹಿರೇಗುಂಟನೂರು) ಗೆ ಬಂದು ನೆಲೆಸುತ್ತಾರೆ.
ಈ ಸಂದರ್ಭದಲ್ಲಿ ಆನೆಗೊಂದಿ ಸಂಸ್ಥಾನ ದೊರೆ ಕೃಷ್ಣದೇವರಾಯರು ಚಿತ್ರದುರ್ಗ ಜಿಲ್ಲೆಯಲ್ಲಿ ಪರಿವಾರ ನೆಲೆಸಲು ಸಮ್ಮತಿ ನೀಡಿ ಕೆಲ ಗ್ರಾಮಗಳನ್ನು ಉಂಬಳಿ ನೀಡುತ್ತಾರೆ. ಆಗ ಹಿರೇಗುಂಟನೂರು ಗ್ರಾಮದಲ್ಲಿ ನೆಲೆಸಿ ಶಕ್ತಿ ದೇವತೆಯಾಗಿ ದ್ಯಾಮಲಾಂಬ ಎನ್ನುವ ಹೆಸರಿನಲ್ಲಿ ರೂಪಗೊಳ್ಳುತ್ತಾಳೆ ಎನ್ನುವ ಪುರಾಣ ಇದೆ.
ಆದಿ ಶಕ್ತಿಯ ರೂಪ ಎನಿಸಿರುವ ದ್ಯಾಮಲಾಂಬ ದೇವಿ ಉತ್ತರ ಭಾರತ ಕಡೆಯಿಂದ ತನ್ನ ಮನೆ ಮಂದಿಯೊಂದಿಗೆ ಬಂದು ಈ ಸ್ಥಳದಲ್ಲಿ ನೆಲೆಯೂರಿ ಜಗದೊಡೆಯ ಪರಶಿವನ ಮಡದಿ ಎನಿಸಿಕೊಂಡು ಈ ಭಾಗದ ಭಕ್ತ ಸಮೂಹಕ್ಕೆ ಅಮ್ಮನಾಗಿ ದರ್ಶನ ನೀಡುತ್ತಾ ಮಾತೃ ಸ್ಥಾನ ಪಡೆದು ಭಕ್ತ ಕುಲವನ್ನು ಸಲಹಿದಳು ಎಂಬ ಪೌರಾಣಿಕ ಹಿನ್ನೆಲೆಯಿದೆ.
ದೇವಸ್ಥಾನ ನಿರ್ಮಾಣ-
ಸಾದು ಒಕ್ಕಲಿಗರ ಶ್ಯಾವಂತಲರ ಕೊಲಕ್ಕೆ ಸೇರಿದ ಭಕ್ತನೊರ್ವನ ಕನಸಿನಲ್ಲಿ ದೇವಿ ದರ್ಶನವಾಗಿ ಯಾವ ಪುಣ್ಯತಾಣದಲ್ಲಿ ಒಣಗಿದ ಬ್ಯಾಲದ ಮರದ ಕಡಗೋಲು ಗೂಟವು ಚಿಗುರೊಡೆದು ಹೆಸರಿರದ ಅಸಾಮಾನ್ಯ ಪವಿತ್ರ ವೃಕ್ಷವೊಂದು ಗೋಚರವಾಗುತ್ತದೆಯೋ ಹಾಗೂ ಅದೇ ಸ್ಥಳದಲ್ಲಿ ಪುಟ್ಟ ಜೀವ ಜಲದ ಬಾವಿಯೊಂದು ಕಾಣಿಸಿಕೊಳ್ಳುವದೋ ಅಲ್ಲಿ ಶ್ರೀ ದ್ಯಾಮಲಾಂಬ ದೇವಿಗೆ ಮಂದಿರ ನಿರ್ಮಾಣ ಮಾಡಲು ಪ್ರೇರಣೆ ಆಗುತ್ತದೆ.
ಈಗಿನ ದೇಗುಲ ಸ್ಥಳದಲ್ಲಿ ಗೌಡರ ಕನಸಿನ ಕುರುಹುಗಳು ಕಂಡು ಭಕ್ತ ಸಮೂಹ ಒಮ್ಮತದ ತಿರ್ಮಾನ ಕೈಗೊಂಡು ದೇಗುಲವನ್ನು ಸ್ಥಾಪಿಸುತ್ತಾರೆ. ಜಾನಪದ ಹಿನ್ನೆಲೆಯ ಗೂಟದ ಊರು, ಹಿರಿಯ ಗುಂಟನೂರು ನಂತರ ಹಿರೇಗುಂಟನೂರು ಎಂಬ ಹೆಸರು ಗ್ರಾಮಕ್ಕೆ ಬಂದಿದೆ ಎಂಬುದಾಗಿ ದೇಗುಲ ಆವರಣದ ಶಿಲಾಶಾಸನ ಸ್ಪಷ್ಟೀಕರಿಸುತ್ತದೆ.
ದನುರ್ಮಾಸದ ಮುಕ್ತಾಯ ಮತ್ತು ಮಕರ ಸಂಕ್ರಮಣದ ವೇಳೆ ಹಾಗೂ ಶ್ರಾವಣ ಮಾಸದ ಪ್ರತಿ ಮಂಗಳವಾರ, ಶುಕ್ರವಾರಗಳಂದು ವಿಶೇಷ ಅಭಿಷೇಕದೊಂದಿಗೆ ಅನ್ನದಾಸೋಹವಿರುತ್ತದೆ. ಚಂದ್ರಮಾನ ಯುಗಾದಿಯ 15 ದಿನಗಳ ನಂತರ ಏಳು ದಿನಗಳ ಕಾಲ ಅಮ್ಮನವರ ಜಾತ್ರಾ ಮಹೋತ್ಸವ ನಡೆಯುತ್ತದೆ.
ಜಾತ್ರೆ ನಿಮಿತ್ತ ಕಲ್ಯಾಣೋತ್ಸವ, ನವಿಲು ಉತ್ಸವ, ಅಶ್ವೋತ್ಸವ, ಮೀಸಲು ಪೂಜೆ, ಗಜೋತ್ಸವ, ರಥೋತ್ಸವ, ಸಿಡಿ ಉತ್ಸವ ಮತ್ತು ಶ್ರೀ ದೇವಿಯ ಹೂವಿನ ಪಲ್ಲಕ್ಕಿ ಉತ್ಸವ, ಕೊನೆಯ ದಿನ ಅವಭೃತೋತ್ಸವ ಆಚರಣೆ ನಡೆಸಲಾಗುತ್ತದೆ.
ಮಾರ್ಗ-ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದ 13 ಕಿ.ಮೀ ದೂರದಲ್ಲಿರುವ ದೇವಸ್ಥಾನಕ್ಕೆ ಮಾಳಪ್ಪನಹಟ್ಟಿ ಮಾರ್ಗವಾಗಿ ಭೀಮಸಮುದ್ರದ ರಸ್ತೆಯಲ್ಲಿ ಚಿತ್ರದುರ್ದದಿಂದ 13 ಕಿಲೋ ಮೀಟರ್ ದೂರ ಸಾಗಬೇಕು.
ಕೋಟ್- ಶ್ರೀ ದ್ಯಾಮಲಾಂಬ ದೇವಸ್ಥಾನ ಅಭಿವೃದ್ಧಿ ಸಮಿತಿ ಹಾಗೂ ಎಲ್ಲಾ ಭಕ್ತರ ಆಶಯದಂತೆ ಶ್ರೀ ದೇವಿಯ ನೂತನ ದೇವಾಲಯವನ್ನು ಶ್ರೀ ದೇವಿಯ ದೇವಾಲಯದ ಮೂಲ ಸ್ವರೂಪವನ್ನು ಆಳಾಗದ ರೀತಿಯಲ್ಲಿ ನಿರ್ಮಿಸಲಾಗುವುದು. ಮುಜರಾಯಿ ಇಲಾಖೆಯ ಅನುಮೋದನೆಯೊಂದಿಗೆ ಎಲ್ಲರ ಸಹಕಾರದಿಂದ ಕೈಗೊಳ್ಳಲು ತೀರ್ಮಾನಿಸಿದ್ದೇವೆ. ಇ.ಚಂದ್ರಣ್ಣ, ಅಧ್ಯಕ್ಷರು, ಶ್ರೀ ದ್ಯಾಮಲಾಂಬ ದೇವಸ್ಥಾನ ಅಭಿವೃದ್ದಿ ಸಮಿತಿ ಟ್ರಸ್ಟ್, ಹಿರೇಗುಂಟನೂರು.