ಚಂದ್ರವಳ್ಳಿ ನ್ಯೂಸ್, ಗುಡೇಕೋಟೆ(ಕೂಡ್ಲಿಗಿ):
ಗ್ರಾಮದ ಎಲ್ಲಾ ಸಮುದಾಯದವರ ಜೊತೆಗೆ, ವಿಶೇಷವಾಗಿ ಮ್ಯಾಸ ಬುಡಕಟ್ಟು ಸಮುದಾಯದ ವಾಲ್ಮೀಕಿ ಸಮುದಾವರು ಪ್ರತಿವರ್ಷದ ವಾಡಿಕೆಯಂತೆ ಗ್ರಾಮದ ಆರಾಧ್ಯ ದೇವಿ, ಐತಿಹಾಸಿಕ ದೊರೆಗಳ ಗುಡ್ಡದ ಮೇಲೆ ನೆಲೆಸಿರುವ ಶ್ರೀ ಮಲಿಯಮ್ಮ ದೇವಿಯ ಸನ್ನಿಧಾನಕ್ಕೆ ತೆರಳಿ ಮಳೆ ಬೆಳೆಗಾಗಿ, ದನಕರುಗಳಿಗೆ ಯಾವುದೇ ರೋಗರುಜಿನಗಳು ಬಾರದಹಾಗೆ ,
ಮಂಗಳವಾರ ಗ್ರಾಮದ ಒಳಿತಿಗಾಗಿ, ವಿಶೇಷ ಪ್ರಾರ್ಥನೆ ಸಲ್ಲಿಸಿ ಪೂಜೆ ನೆರವೇರಿಸಿದರು. ಗತಕಾಲದ ಪಾಳೆಗಾರರ ಇತಿಹಾಸ ಸಾರುವ ಹಾಗೂ ಪಾಳೆಗಾರರ ಮನೆತನದವರು ಪೂಜಿಸುವ ನಾಡಿನ ಭಕ್ತರ ಕೋರಿಕೆಯನ್ನು ಈಡೇರಿಸುವ ಮಹಾತಾಯಿ ಶ್ರೀ ಮಲಿಯಮ್ಮ,ಕಾಳಮ್ಮ,ಕೊಡಿ ದುರುಗಮ್ಮ, ಪಾರ್ವತಿ ಪರಮೇಶ್ವರ, ರಾಮಲಿಂಗೇಶ್ವರ,ಹನುಮಂತ ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಿ ವಿಶೇಷ ಪೂಜೆ ಸಲ್ಲಿಸುವುದು ಪ್ರತಿವರ್ಷದ ಸಂಪ್ರದಾಯವಾಗಿದೆ.ಇದನ್ನು ಹೆಡಿಗೆ ಪರುವು ಎಂದು ಕರೆಯುವರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಕ್ತರು ಮಂಗಳವಾದ್ಯ ಗಳೊಂದಿಗೆ ಪಾದಯಾತ್ರೆ ಮೂಲಕ ದೇವಿಯ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ, ಸಾಮೂಹಿಕ ಪ್ರಸಾದ ಸ್ವೀಕರಿಸಿ, ಗ್ರಾಮದ ಮಹಿಳೆಯರು ಸಾಂಸ್ಕೃತಿಕವಾಗಿ ಗ್ರಾಮೀಣ ಆಟಗಳನ್ನು ಹಾಡಿ ಸಂಜೆ ಮನೆಗೆ ತೆರಳಿದರು.
ಈ ಸಂದರ್ಭದಲ್ಲಿ ಗುಡೇಕೋಟೆ ಗ್ರಾಮದ ಗ್ರಾಮಸ್ಥರು, ದೇವಿಯ ಅರ್ಚಕರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಸದ್ಭಕ್ತರು ಉಪಸ್ಥಿತರಿದ್ದರೆಂದು ಸಿ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.

