ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಪ್ರತಿಯೊಬ್ಬರು ಇ-ಖಾತಾ ಮಾಡಿಸಿಕೊಳ್ಳಬೇಕು. ಇ-ಖಾತಾ ಬಂದಿದೆ ಎಂದು ಆಸ್ತಿ ಮಾರಾಟ ಮಾಡಬಾರದು. ಇ-ಖಾತೆ ಇದ್ದರೆ ಸಿಂಗಲ್ ಟ್ಯಾಕ್ಸ್ ಕಟ್ಟಲು, ಲೋನ್ ತೆಗೆದುಕೊಳ್ಳಲು ಅನುಕೂಲವಾಗುತ್ತದೆ. ಆದ್ದರಿಂದ ಇ-ಖಾತಾ ಅಭಿಯಾನವನ್ನು ಎಲ್ಲರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಧೀರಜ್ ಮುನಿರಾಜ್ ಹೇಳಿದರು.
ನಗರಸಭೆ ವ್ಯಾಪ್ತಿಯ 13ನೇ ವಾರ್ಡ್ ಭುವನೇಶ್ವರಿ ನಗರದಲ್ಲಿ ಇ-ಖಾತಾ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ 16 ಸಾವಿರ ಆಸ್ತಿಗಳು ಇ-ಖಾತಾ, ಬಿ ಖಾತಾ ಬಾಕಿ ಇದೆ. ಅಷ್ಟುಆಸ್ತಿಗಳಿಗೆ ಇ-ಖಾತಾ, ಬಿ ಖಾತಾ ಮಾಡಿಸಬೇಕು ಎಂದರು.
ಸ್ವಚ್ಛ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇನೆ ಎಂದು ಅಂದು ನಾನುನಿಮಗೆ ಮಾತು ಕೊಟ್ಟಿದ್ದೆ. ಅದರಂತೆ ಈಗ ನಾನು ನಡೆದುಕೊಳ್ಳುತ್ತಿದ್ದೇನೆ ಎಂದರು.
ನಗರಸಭೆಯಲ್ಲಿ ಇಂದು ಯಾವುದಕ್ಕೆ, ಯಾರು ಟ್ಯಾಕ್ಸ್ ಕಟ್ಟಿದ್ದಾರೆ ಎಂಬುದರ ಕುರಿತು ಸೂಕ್ತ ದಾಖಲೆಗಳು ಇಲ್ಲ.ಇನ್ನೂ ಎಷ್ಟು ಟ್ಯಾಕ್ಸ್ ಕಟ್ಟೋದು ಬಾಕಿ ಇದೆ ಎಂಬುದರ ಕುರಿತೂ ದಾಖಲೆ ಇಲ್ಲ. ನಾನಂತು ಸ್ವಚ್ಛವಾಗಿದ್ದೇನೆ. ಎಲ್ಲರನ್ನು ಸ್ವಚ್ಛಮಾಡುವುದಕ್ಕೆ ಆಗಲ್ಲ. ಐದು ವರ್ಷದ ನಂತರ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ಇಟ್ಟುಕೊಂಡು ನಿಮ್ಮ ಮುಂದೆ ಬಂದು ಮಾತುನಾಡುತ್ತೇನೆ ಎಂದರು.
ನಂತರ ವಾರ್ಡ್ ಸದಸ್ಯ ಬಂತಿ ವೆಂಕಟೇಶ್ ಮಾತನಾಡಿ, ನಮ್ಮ ವಾರ್ಡ್ ಅಭಿವೃದ್ಧಿ ಮಾಡಲು ಮೂರುವರೆ ವರ್ಷದಲ್ಲಿ ನಾಲ್ಕೂವರೆ ಕೋಟಿ ಅನುದಾನ ತಂದು ಕಾಮಗಾರಿ ಮಾಡಿ ಅಭಿವೃದ್ಧಿ ಮಾಡಿದ್ದೇನೆ. ಸುಮಾರು 28 ವರ್ಷದಿಂದ ಅಂಗನವಾಡಿ ಸಮಸ್ಯೆ ಇದೆ. ಸ್ವಂತ ಕಟ್ಟಡವಿಲ್ಲದೇ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಅಂಗನವಾಡಿ ನಡೆಸಲು ಸ್ವಂತ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಅನುದಾನಬಿಡುಗಡೆ ಮಾಡಬೇಕು. ನಮ್ಮ ವಾರ್ಡ್ ನಲ್ಲಿ ಜಲ್ವಂತ ಸಮಸ್ಯೆಯಾದ ಯುಜಿಡಿ ಸಮಸ್ಯೆ ಇದೆ. ಅದನ್ನು ಕೂಡಲೇ ಬಗೆಹರಿಸಲು ಸಹಕಾರ ನೀಡಬೇಕು ಎಂದು ಶಾಸಕರ ಬಳಿ ಮನವಿ ಮಾಡಿದರು.
ಇ-ಖಾತಾ ವಿತರಣಾ ಕಾರ್ಯಕ್ರಮದಲ್ಲಿ ಸುಮಾರು 200 ಮಂದಿಗೆ ಇ-ಖಾತಾ ಪತ್ರ ವಿತರಣೆ ಮಾಡಲಾಯಿತು. ಈ ವೇಳೆ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್, ವಾರ್ಡ್ ನ ಪ್ರಮುಖ ಮುಖಂಡರು, ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.