ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶಂಕುಸ್ಥಾಪನೆಯಾಗಿರುವ ಜಿಲ್ಲಾಸ್ಪತ್ರೆಯ ಬಗ್ಗೆ ಸದನದಲ್ಲಿ ಈಗಾಗಲೇ ಪ್ರಶ್ನೆ ಮಾಡಲಾಗಿದ್ದು, ದೊಡ್ಡ ಬಳ್ಳಾಪುರದಲ್ಲಿಯೇ ಜಿಲ್ಲಾಸ್ಪತ್ರೆ ನಿರ್ಮಾಣವಾ ಗಲಿದ್ದು, ಯಾವುದೇ ಕಾರಣಕ್ಕೂ ಕೈ ತಪ್ಪುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.
ನಗರದ ಕನ್ನಡ ಜಾಗೃತ ಭವನದಲ್ಲಿ ಜಿಲ್ಲಾಸ್ಪತ್ರೆ ತಾಲ್ಲೂಕಿನಲ್ಲಿ ಶೀಘ್ರವಾಗಿ ನಿರ್ಮಾಣಮಾಡುವಂತೆ ಜಿಲ್ಲಾಸ್ಪತ್ರೆ ಹೋರಾಟ ಸಮಿತಿಯಿಂದ ನಡೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲಾಸ್ಪತ್ರೆಯ ಬಗ್ಗೆ ಐದು ಬಾರಿ ಸದನದಲ್ಲಿ ಈಗಾಗಲೇ ಪ್ರಶ್ನೆ ಮಾಡಲಾಗಿದೆ. ಇಲ್ಲಿನ ಸಮಸ್ಯೆಗಳು, ಬೇಡಿಕೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಕೈತಪ್ಪುವ ಮಾತೇ ಬೇಡ. ಜಿಲ್ಲಾಸ್ಪತ್ರೆಯ ಹೋರಾಟ ಸಮಿತಿಯಲ್ಲಿ ಅನೇಕ ಹೋರಾಟಗಾರರು, ಹಿರಿಯರು ಭಾಗಿಯಾಗಿದ್ದಾರೆ. ಕಳೆದ ವರ್ಷ ದೇವನಹಳ್ಳಿಯಲ್ಲಿ ನಡೆದ ಗ್ಯಾರೆಂಟಿ ಸಮಾವೇಶದಲ್ಲಿ ಜಿಲ್ಲಾಸ್ಪತ್ರೆಯ ಯೋಜನೆಗೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಿದ್ದರು. ನಿಗದಿ ಪಡಿಸಿದ ಅನುದಾನವನ್ನು ಜಿಲ್ಲಾಸ್ಪತ್ರೆಗೆ ಕೊಡಬೇಕಿದೆ.
ದೊಡ್ಡಬಳ್ಳಾಪುರದ ತಾಯಿ ಮಗು ಆಸ್ಪತ್ರೆಯಲ್ಲಿ ಒಂದು ತಿಂಗಳಲ್ಲಿ 200 ರಿಂದ 250 ಹೆರಿಗೆಗಳು ಆಗುತ್ತಿದೆ. ಉಳಿದ ತಾಲೂಕುಗಳಲ್ಲಿ 100 ರಿಂದ 120 ಹೆರಿಗೆಗಳಾಗುತ್ತದೆ. ನಮಗೆ ಜಿಲ್ಲಾಸ್ಪತ್ರೆ ಅತ್ಯಂತ ಅವಶ್ಯಕವಾಗಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಅವರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜೊತೆ ಮಾತನಾಡಿದ್ದಾರೆ. ಮುಂದಿನ ವಾರ ವಿವಿಧ ಇಲಾಖೆಗಳ ಸಭೆ ನಡೆಸುವ ಸಾಧ್ಯತೆ ಇದೆ. ಅಗತ್ಯ ಕ್ರಮವಹಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಜಿಲ್ಲಾಸ್ಪತ್ರೆ ಕೈತಪ್ಪುವುದಿಲ್ಲ. ನಿಮ್ಮ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದರು.
ಮಾಜಿ ಶಾಸಕ ವೆಂಕಟರಮಣಯ್ಯ ಮಾತನಾಡಿ, 2013-14ರ ಸಾಲಿನ ಬಜೆಟ್‌ನಲ್ಲಿ ಜಿಲ್ಲಾಸ್ಪತ್ರೆಯ ವಿಚಾರ ಪ್ರಸ್ತಾಪ ಆಗಿತ್ತು. ಆದರೆ ರಾಜ್ಯದಲ್ಲಿ ರಾಜಕೀಯ ಬದಲಾವಣೆಯಿಂದ ಜಾರಿಗೆ ಸಾಧ್ಯವಾಗಿಲ್ಲ. 2014-15 ರಲ್ಲಿ ಜಿಲ್ಲಾಸ್ಪತ್ರೆ ಕೆಸಿ ಜನರಲ್‌ಗೆ ಹೊಗುವ ಪ್ರಸ್ತಾವನೆ ಬಂದಿತ್ತು.
ಹಿಂದಿನ ಜಿಲ್ಲಾ ಮಂತ್ರಿಗಳಾದ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಅದು ಆಗದಂತೆ ಕ್ರಮವಹಿಸಲಾಗಿತ್ತು. ಇದನ್ನು ಕ್ಯಾಬಿನೆಟ್‌ನಲ್ಲಿ ರದ್ದು ಮಾಡಿಸಿದೆವು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಮಟ್ಟದ ಕೇಂದ್ರಗಳ ಆರಂಭಕ್ಕೆ ಮಾತುಕತೆ ಆಗಿತ್ತು. ಜಿಲ್ಲೆಯ ಮೂರು ತಾಲೂಕುಗಳಲ್ಲಿ ಮೆಡಿಕಲ್ ಕಾಲೇಜಿದೆ ನಮ್ಮಲ್ಲಿ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಕೂಡ ಒತ್ತಾಯ ಮಾಡಿದ್ದೇವೆ. ಜಿಲ್ಲಾಸ್ಪತ್ರೆ ತಾಲೂಕಿನಲ್ಲಿಯೇ ಆಗಬೇಕು. ಹೋರಾಟಗಾರರೊಂದಿಗೆ ಕೈ ಜೋಡಿಸಲಾಗುವುದು ಎಂದರು.
ಈ ವೇಳೆ ಮಾತನಾಡಿದ ಹೋರಾಟಗಾರ ಸಂಜೀವ ನಾಯಕ್ ಹಾಲಿ ಹಾಗೂ ಮಾಜಿ ಶಾಸಕರು ಒಂದಾಗಿ ಜಿಲ್ಲಾಸ್ಪತ್ರೆಗಾಗಿ ಕೆಲಸ ಮಾಡಬೇಕು .ವೈಯಕ್ತಿಕ ರಾಜಕೀಯ ಭಿನ್ನಾಭಿಪ್ರಾಯ ಬದಿಗೊತ್ತಿ ಕೆಲಸ ಮಾಡಬೇಕು. ಜಿಲ್ಲಾಸ್ಪತ್ರೆ ಶೀಘ್ರವಾಗಿ ನಿರ್ಮಾಣವಾಗಬೇಕು. ಜಿಲ್ಲಾಸ್ಪತ್ರೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಸಚಿವರು, ಕಂದಾಯ ಸಚಿವರಿಗೂ ಮನವಿ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ,ಅನಂದ ಜೆಡಿಎಸ್ ಹರೀಶ್ಗೌಡ, ಹಿರಿಯ ಹೋರಾಟಗಾರರಾದ. ಸಂಜೀವ್ನಾಯಕ್, ತ.ನ.ಪ್ರಭುದೇ-ವ್, ಆರ್.ಕೆಂಪರಾಜ್, ರಾಜಘಟ್ಟ ರವಿ, ಮರುಳಾರಾಧ್ಯ, ಪಿ.ಎ.ವೆಂಕಟೇ-ಶ್, ಹುಲಿಕಲ್ ನಟರಾಜ್,ರೇವತಿ, ಕವಿತಾ, ನಾಗರತ್ನ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಗೋವಿಂದರಾಜು, ಯುವ ಸಂಚಲ ಅಧ್ಯಕ್ಷ ಚಿದಾನಂದಮೂರ್ತಿ ಸೇರಿದಂತೆ ವಿವಿಧ ಸಂಘಟನೆಗಳ ಮುಖ್ಯಸ್ಥರು ಹಾಜರಿದ್ದರು.

