ಕೆರೆಗೆ ಕಾರ್ಖಾನೆಯ ಕಲುಷಿತ ನೀರು-ಧೀರಜ್ ಮುನಿರಾಜು ಆಕ್ರೋಶ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಪ್ರಪಂಚದ ಅತಿ ದೊಡ್ಡ ಕೈಗಾರಿಕಾ ಪ್ರದೇಶವಾಗಿದ್ದು ಪ್ರತಿಷ್ಠಿತ ಕಂಪನಿಯಾದ  ಫಾಕ್ಸ್ ಕಾನ್ ಕಂಪನಿಯ ಕಲುಷಿತ ಘನ ತ್ಯಾಜ್ಯ ನೀರು ತಾಲ್ಲೂಕಿನ ಕೊನಘಟ್ಟ ಕೆರೆಯ ಒಡಲು ಸೇರುತ್ತಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.

 ಕಳೆದ ಕೆಲವು ದಿನಗಳಿಂದ ಫಾಕ್ಸ್ ಕಾನ್ ಕಂಪನಿಯ ಕಲುಷಿತ ನೀರು ತಾಲೂಕಿನ ಕೊನಘಟ್ಟ ಕೆರೆಯ ಒಡಲು ಸೇರುತ್ತಿದ್ದು, ಇದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿತ್ತು. 

  ಫಾಕ್ಸ್ ಕಾನ್ ಕಂಪನಿ ನೂತನ ಎಸ್‌ಟಿ ಪಿ ಪ್ಲಾಂಟ್ ಮಾಡುತ್ತಿದ್ದು, ಕಾರ್ಖಾನೆಯ ಕಲುಷಿತ ನೀರನ್ನು ತಾತ್ಕಾಲಿಕವಾಗಿ ಶೇಖರಣೆ ಮಾಡಲು ಒಂದು ಕುಂಟೆಯನ್ನು ನಿರ್ಮಾಣ ಮಾಡಲಾಗಿದೆ. ಕುಂಟೆ ತುಂಬಿದ ಕಲುಷಿತ ನೀರು ರಾಜಕಾಲುವೆಯ ಮೂಲಕ ಕೊನಘಟ್ಟ ಕೆರೆ ಸೇರುತ್ತಿದೆ. 

ಈಗಾಗಲೆ ದೊಡ್ಡಬಳ್ಳಾಪುರ ಕೆಲವು ಬಾಗದಲ್ಲಿ ಕೈಗಾರಿಕಾ ರಾಸಾಯಿನಿಕ ನೀರು ಭೂಮಿಯ ಒಡಲು ಸೇರಿದ್ದು  ಕೊಳವೆ ಬಾವಿಗಳಲ್ಲಿ ರಾಸಾಯಿನಿಕ ತ್ಯಾಜ್ಯದ ನೀರು ಬರುತ್ತಿರುವುದು ಕಂಡು ಬಂದಿದೆ ಕುಡಿಯಲು ಯೋಗ್ಯವಲ್ಲದ ಸ್ಥಿತಿಗೆ ತಲುಪಿರುವ ಸಂದರ್ಭದಲ್ಲಿ ಕಲುಷಿತ ಘನ ತ್ಯಾಜ್ಯ ನೀರನ್ನು ತಾತ್ಕಾಲಿಕವಾಗಿ ಶೇಖರಣೆ ಮಾಡಲು ನಿರ್ಮಿಸಿದ್ದ ಕುಂಟೆ ತುಂಬಿ ಹೋಗಿದ್ದು ಈಗ ಕಟ್ಟೆಯನ್ನು ಹೊಡೆದು ರಾಜಕಾಲುವೆಗೆ ಹರಿಯ ಬಿಡಲಾಗಿದೆ. ಎಂಬ ಸುದ್ದಿ ತಿಳಿದ ಗ್ರಾಮಸ್ಥರು ಪಾಕ್ಸ್ ಕಾನ್ ಕಂಪನಿಯ ಬಳಿ ಜಮಾಯಿಸಿ ಕಾರ್ಖಾನೆಯ ಕಲುಷಿತ ನೀರು ನೇರವಾಗಿ ನಮ್ಮ ಗ್ರಾಮದ ಕೆರೆಗೆ ಹರಿದು ಬರುತ್ತಿದೆ. ಈ ಕೂಡಲೇ ಕೆರೆಗೆ ಹರಿಯುತ್ತಿರುವ ಕಲುಷಿತ ನೀರನ್ನು ತಕ್ಷಣ ಬಂದ್ ಮಾಡುವಂತೆ ಸ್ಥಳೀಯರು ಆಗ್ರಹಿಸಿದರು. ಸದ್ಯ ಕುಂಟೆಯ ಕಟ್ಟೆ ಹೊಡೆದಿರುವುದನ್ನು ಮುಚ್ಚುವಂತೆ  ಪಟ್ಟು ಹಿಡಿದಿದ್ದರು. ಇಲ್ಲಿನ ತ್ಯಾಜ್ಯ ನೀರು ರಾಜಕಾಲುವೆ ಸೇರಿದಂತೆ ಯಾವುದೇ ಮೂಲಗಳಿಂದ ಹೊರಬಾರದಂತೆ ಸಿಮೆಂಟ್ ವಾಲ್ ನಿರ್ಮಿಸುವಂತೆ ಒತ್ತಾಯಿಸಿದರು.

  ವಿಷಯ ತಿಳಿದು ಬೆಳಗ್ಗೆ ಯಿಂದಲೇ ಕಾರ್ಯಪ್ರವೃತ್ತರಾದ ಶಾಸಕ ಧೀರಜ್ ಮುನಿರಾಜು ಜೊತೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು. ಸ್ಥಳದಲ್ಲಿ ಮೊಕ್ಕಾಂ ಹೂಡಿದರು. ಕಾರ್ಖಾನೆಯ ಕಲುಷಿತ ನೀರು ಕೆರೆಗೆ ಬಿಟ್ಟಿರುವ ಬಗ್ಗೆ ವಿವರಣೆ ಕೇಳಲು ಕಾರ್ಖಾನೆಯ ಸಿಬ್ಬಂದಿಯನ್ನು ಕರೆದರು. ಆದರೆ, ಫಾಕ್ಸ್ ಕಾನ್ ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ಬರುವುದಕ್ಕೆ ಮೀನಾಮೇಷ ಎಣಿಸುತ್ತಾ… ಒಬ್ಬರ ಮೇಲೆ ಮತ್ತೊಬ್ಬರು ಹೇಳಿಕೊಂಡು ಕಾಲಹರಣ ಮಾಡುತ್ತಿದ್ದರು. 

  ಶಾಸಕರು, ಅಧಿಕಾರಿಗಳು ಹಾಗೂ ಗ್ರಾಮಸ್ಥರ ಆಗ್ರಹಕ್ಕೆ ಸಿಬ್ಬಂದಿ ಕ್ಯಾರೆ ಎನ್ನದಿರುವುದು ಸ್ಥಳೀಯರು, ಹಾಗೂ ಶಾಸಕರಲ್ಲಿ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಯಿತು. 

  ಈ ವೇಳೆ ಸ್ಥಳಕ್ಕೆ ಬರಲು ವಿಳಂಬ ಮಾಡಿದ ಕಾರ್ಖಾನೆಯ ಸಿಬ್ಬಂದಿಯನ್ನು ಕುರಿತು ಶಾಸಕರು, “ನಮ್ಮ ತಾಲ್ಲೂಕಿನ ಜನರ ಜೀವ ತೆಗೆಯಲು ಬಂದಿದ್ದೀರಾ… ಕೊನಘಟ್ಟ ಕೆರೆಗೆ ಹರಿದು ಹೋಗುತ್ತಿರುವ ಕಾರ್ಖಾನೆಯ ಕಲುಷಿತ ಘನ ತ್ಯಾಜ್ಯ ನೀರನ್ನು ಈ ಕೂಡಲೇ ನಿಲ್ಲಿಸದಿದ್ದರೆ ಕಾರ್ಖಾನೆಯ ಮುಂದೆ ದರಣಿ ಕೂರುತ್ತೇನೆ” ಎಂದು ಎಚ್ಚರಿಕೆ ನೀಡಿದರು. ಕಂಪನಿಯಿಂದ ಕೆರೆಗೆ ಹರಿಯುತ್ತಿರುವ ಕಲುಷಿತ ನೀರು ನಿಲ್ಲುವವರೆಗೂ ಸ್ಥಳದಿಂದ ಹೊರಡುವುದಿಲ್ಲ ಎಂದು ಶಾಸಕ ಧೀರಜ್ ಮುನಿರಾಜ್ ಅವರು ಪಟ್ಟುಹಿಡಿದರು. ನಂತರ ಸ್ಥಳಕ್ಕೆ ಬಂದ ಕಾರ್ಖಾನೆಯ ಸಿಬ್ಬಂದಿ ಹೊಡೆದಿರುವ ಕುಂಟೆಯ ಕಟ್ಟೆಯನ್ನು ಮುಚ್ಚಿದರು. 

  ಈ ವೇಳೆ ತಹಶೀಲ್ದಾರ್ ವಿಭಾ ವಿದ್ಯಾ ರಾಠೋಡ್, ತಾ.ಪಂ ಇಓ ಮುನಿರಾಜು, ಗ್ರಾ.ಪಂ ಅಧ್ಯಕ್ಷೆ ಜ್ಯೋತಿ, ಪಿಡಿಒ ರಷ್ಮಿ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು. 

  ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಏಷ್ಯಾದ ಎರಡನೇ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿದ್ದು, ಇಲ್ಲಿನ ನೂರಾರು ಕಾರ್ಖಾನೆಗಳ‌ರಾಸಾಯನಿಕ ಮಿಶ್ರಿತ ಕಲುಷಿತ ಘನ ತ್ಯಾಜ್ಯ ನೀರನ್ನ ನೇರವಾಗಿ ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ಬಿಡಲಾಗುತ್ತಿದೆ. ಇದರಿಂದ ಅರ್ಕಾವತಿ ನದಿ ಪಾತ್ರದ ಕೆರೆಗಳು ಸೇರಿದಂತೆ ಈ ಭಾಗದ ಅಂತರ್ಜಲ ಸಂಪೂರ್ಣವಾಗಿ ಕಲುಷಿತಗೊಂಡು ಜನ ಜಾನುವಾರುಗಳು ಕುಡಿಯುವ ನೀರು ವಿಷಯುಕ್ತವಾದ ಪರಿಸ್ಥಿತಿಗೆ ಬಂದು ತಲುಪಿದೆ‌. ಈ ಕೆರೆಗಳನ್ನು ಶುದ್ಧೀಕರಿಸುವಂತೆ, ಕಾರ್ಖಾನೆಗಳ‌ ರಾಸಾಯನಿಕ ಮಿಶ್ರಿತ ಕಲುಷಿತ ನೀರನ್ನು ಕೆರೆಗಳಿಗೆ ಬಿಡುವವರ ವಿರುದ್ಧ ಕ್ರಮ ಜರುಗಿಸುವಂತೆ ಸ್ಥಳೀಯರು ಅನೇಕ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. 

 ಈ ಸಮಸ್ಯೆಯ ಜೊತೆಗೆ ಇದೀಗ ತಾಲೂಕಿನ ಹೊರವಲಯದ ಕೊನಘಟ್ಟ ಸಮೀಪದಲ್ಲಿನ ಫಾಕ್ಸ್ ಕಾನ್ ಕಂಪನಿ ಘನ ತ್ಯಾಜ್ಯ ಕಲುಷಿತ ನೀರನ್ನು ಸ್ವಚ್ಛವಾಗಿರುವ ಕೊನಘಟ್ಟ ಕೆರೆಗೆ ಹರಿದು ಬಿಟ್ಟಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಇದಕ್ಕೆ ಆರಂಭದಲ್ಲೇ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

 

Share This Article
error: Content is protected !!
";