ಅಲಂಕಾರಿಕವಾಗಿ ಗಾಂಜಾ ಗಿಡ ಬೆಳೆಸಿದ್ದ ದಂಪತಿಗಳಿಗೆ ಸಂಕಷ್ಟ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮನೆಯ ಟೆರಾಸ್ ನಲ್ಲಿ ಅಲಂಕಾರಿಕವಾಗಿ ಗಾಂಜಾ ಗಿಡ ಬೆಳೆಸಿದ್ದನ್ನು ರೀಲ್ಸ್ ಮಾಡಿದ್ದ ಫಾಸ್ಟ್ ಫುಡ್ ಹೋಟೆಲ್‌ವೊಂದರ ಮಾಲೀಕರೂ ಆಗಿರುವ ಸಿಕ್ಕಿಂ ಮೂಲದ ದಂಪತಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿರುವ ಘಟನೆ ನಡೆದಿದೆ.

 ಎಂಎಸ್‌ಆರ್ ನಗರ ನಿವಾಸಿಗಳಾದ ಊರ್ಮಿಳಾ ಕುಮಾರಿ ಮತ್ತು ಸಾಗರ್ ಗುರುಂಗ್ ಸಂಕಷ್ಟಕ್ಕೆ ತುತ್ತಾಗಿದ್ದು, ಈ ದಂಪತಿಗೆ ಠಾಣಾ ಜಾಮೀನು ಮೇರೆಗೆ ಪೊಲೀಸರು ಬಂಧಮುಕ್ತಗೊಳಿಸಿದ್ದಾರೆ.

ಈ ದಂಪತಿ ಬೆಳೆದಿದ್ದ 54 ಗ್ರಾಂ ತೂಕದ ಗಾಂಜಾ ಗಿಡ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ರೀಲ್ಸ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಊರ್ಮಿಳಾ ಅಪ್‌ಲೋಡ್ ಮಾಡಿದ್ದರು.

ಅಪ್ಲೋಡ್ ಮಾಡಿದ್ದ ರೀಲ್ಸ್‌ನಲ್ಲಿ ಗಾಂಜಾ ಗಿಡಗಳಿರುವುದನ್ನು ನೋಡಿ ಪೊಲೀಸರಿಗೆ ಸ್ಥಳೀಯ ಕೆಲ ಯುವಕರು ವಿಷಯ ತಿಳಿಸಿದರು.

ಈ ಮಾಹಿತಿ ಹಿನ್ನೆಲೆಯಲ್ಲಿ ಮನೆ ಪರಿಶೀಲನೆಗೆ ತೆರಳಿದಾಗ ಹೂವಿನ ಕುಂಡದಲ್ಲಿ ಗಾಂಜಾ ಗಿಡ ಕಿತ್ತು ದಂಪತಿ ಬಿಸಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹಲವು ದಿನಗಳಿಂದ ಎಂ.ಎಸ್‌.ಆರ್.ನಗರದಲ್ಲಿ ಫಾಸ್ಟ್ ಫುಡ್ ಹೋಟೆಲನ್ನು ಊರ್ಮಿಳಾ ದಂಪತಿ ನಡೆಸುತ್ತಿದ್ದು, ಆ ಹೋಟೆಲ್‌ಮಹಡಿಯಲ್ಲಿ ದಂಪತಿ ನೆಲೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮನೆಯ ಬಾಲ್ಕನಿಯಲ್ಲಿ 20 ವಿವಿಧ ಹೂವಿನ ಗಿಡಗಳ ಜತೆ ಅಕ್ರಮವಾಗಿ ಅವರು ಗಾಂಜಾ ಬೆಳೆಸಿದ್ದರು. ಆದರೆ ದಂಪತಿ ಗಾಂಜಾ ವ್ಯಸನಿಗಳಲ್ಲ. ಅಲಂಕಾರಿಕವಾಗಿ ಗಾಂಜಾ ಬೆಳೆಸಿ ಸಂಕಷ್ಟಕ್ಕೆ ತುತ್ತಾಗಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ ಮತ್ತೆ ಗಾಂಜಾ ಗಿಡ ಬೆಳೆಯದಂತೆ ಎಚ್ಚರಿಕೆ ಕೊಟ್ಟು ಠಾಣಾ ಜಾಮೀನಿನ ಮೇರೆಗೆ ಬಿಡುಗಡೆಗೊಳಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";