ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಗುರುವಾರ ರಾತ್ರಿ ನಿಧನರಾದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ನವದೆಹಲಿಯ ಅವರ ನಿವಾಸದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿದಂತೆ ಹಲವು ಗಣ್ಯರು ಶುಕ್ರವಾರ ಭೇಟಿ ನೀಡಿ ಪುಷ್ಪಗುಚ್ಛ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು.
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ತ್ರಿವರ್ಣ ಧ್ವಜ ಹೊದಿಸಿ, ಹೂಗುಚ್ಛ ಅರ್ಪಿಸಿ ಪಕ್ಷ ಬೇಧ ಮರೆತು ನಾಯಕರು ಅಂತಿಮ ಗೌರವ ಸಲ್ಲಿಸಿದರು. ಈ ವೇಳೆ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಮತ್ತಿತರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಮನ ಮೋಹನ್ ಸಿಂಗ್ ಅವರ ಮಗಳು ಅಮೆರಿಕದ್ದು ಅವರ ಬರುವಿಕೆಗಾಗಿ ಕುಟುಂಬ ಕಾಯುತ್ತಿದ್ದು, ಅವರು ಬಂದ ನಂತರ ಶನಿವಾರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ. ಅಲ್ಲಿಯವರೆಗೂ ಅವರ ನವದೆಹಲಿಯ ನಿವಾಸದಲ್ಲಿಯೇ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬ ಮೂಲಗಳು ಮತ್ತು ಕಾಂಗ್ರೆಸ್ ಪಕ್ಷವು ತಿಳಿಸಿದೆ.
ಶನಿವಾರ ಬೆಳಗ್ಗೆ 8 ಗಂಟೆಗೆ ಕಾಂಗ್ರೆಸ್ ಕೇಂದ್ರ ಕಚೇರಿಗೆ ಪಾರ್ಥಿವ ಶರೀರವನ್ನು ತರಲಾಗುತ್ತದೆ. ಅಲ್ಲಿ ಬೆಳಗ್ಗೆ 8-30 ರಿಂದ 9-30ರವರೆಗೂ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಬೆಳಗ್ಗೆ 9-30ಕ್ಕೆ ಅಂತಿಮ ಯಾತ್ರೆ ಶುರುವಾಗಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
ಮನಮೋಹನ್ ಸಿಂಗ್(92) ಅವರು ಗುರುವಾರ ವಯೋಸಹಜ ಕಾಯಿಲೆಯಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಮನಮೋಹನ್ ಸಿಂಗ್ ಅವರು ಅಗಲಿದ್ದಾರೆ.