ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ ಸಂಬಂಧ ಎಸ್ಪಿ ತಲೆದಂಡದ ಬೆನ್ನಲ್ಲೇ ಡಿಐಜಿಪಿ ವರ್ತಿಕಾ ಕಟಿಯಾರ್ ಅವರನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಶಾಸಕ ಜನಾರ್ದನ ರೆಡ್ಡಿ ಮತ್ತು ಭರತ್ ರೆಡ್ಡಿ ಬೆಂಬಲಿಗರ ನಡುವೆ ನಡೆದ ಗಲಾಟೆ ಭಾರೀ ಸದ್ದು ಮಾಡಿತ್ತು. ಈ ವಿಚಾರವಾಗಿ ವಿಪಕ್ಷಗಳ ಎಸ್ಪಿ ಒಬ್ಬರ ತಲೆ ದಂಡಕ್ಕೆ ಆಕ್ಷೇಪಿಸಿದ್ದರಿಂದಾಗಿ ಡಿಐಜಿಪಿ ವರ್ತಿಕಾ ಕಟಿಯಾರ್ ಅವರನ್ನು ಸಿವಿಲ್ ರೈಟ್ಸ್ ಮತ್ತು ಎನ್ಫೋರ್ಸ್ಮೆಂಟ್ ವಿಭಾಗಕ್ಕೆ ಟ್ರಾನ್ಸ್ಫರ್ ಮಾಡಲಾಗಿದ್ದು,
ಬಳ್ಳಾರಿ ವಲಯದ ಐಜಿಪಿಯಾಗಿ ಡಾ.ಪಿ.ಎಸ್.ಹರ್ಷ ಅವರನ್ನು ನೇಮಕ ಮಾಡಲಾಗಿದೆ. ಪವನ್ ನೆಜ್ಜೂರು ಅವರ ಅಮಾನತಿನಿಂದ ತೆರವಾಗಿದ್ದ ಎಸ್ಪಿ ಸ್ಥಾನಕ್ಕೆ ಡಾ. ಸುಮನ ಪೆನ್ನೆಕರ್ ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.
ಬ್ಯಾನರ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರು ಅವರನ್ನ ಅಮಾನತು ಮಾಡಿತ್ತು. ದುರ್ದೈವ ಅಂದರೆ ಬಳ್ಳಾರಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ ಪವನ್ ನೆಜ್ಜೂರು ಸಸ್ಪೆಂಡ್ ಆಗಿದ್ದರು.
ಪರಿಸ್ಥಿತಿ ನಿಭಾಯಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಹೀಗಾಗಿ ಪವನ್ ನೆಜ್ಜೂರು ಅವರನ್ನು ಅಮಾನತು ಮಾಡುವಂತೆ ಬಳ್ಳಾರಿ ಡಿಐಜಿ ವರ್ತಿಕಾ ಕಟಿಯಾರ ಅವರು ಸರ್ಕಾರಕ್ಕೆ ವರದಿ ನೀಡಿದ್ದರು.
ಆ ಬೆನ್ನಲ್ಲೇ ಸರ್ಕಾರ ಕ್ರಮ ಕೈಗೊಂಡಿತ್ತು. ಅಮಾನತು ಬೆನ್ನಲ್ಲೇ ಪವನ್ ನಜ್ಜೂರ್ ತುಮಕೂರಿನಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಆಘಾತಕಾರಿ ಸುದ್ದಿಗಳು ಹರಿದಾಡಿದ್ದವು. ಸ್ನೇಹಿತನ ಫಾರ್ಮ್‌ಹೌಸ್‌ನಲ್ಲಿ ಮಾತ್ರೆ ಸೇವಿಸಿದ್ದ ನಜ್ಜೂರ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ ಎನ್ನಲಾಗಿತ್ತು.

ಬಳಿಕ ಈ ಬಗ್ಗೆ ಖುದ್ಧು ಸ್ಪಷ್ಟನೆ ನೀಡಿದ್ದ ಎಸ್ಪಿ ಪವನ್ ನೆಜ್ಜೂರ್ ಅವರ ತಂದೆ ಯಾವುದೇ ಕಾರಣಕ್ಕೂ ನನ್ನ ಪುತ್ರ ಆತ್ಮಹತ್ಯೆಯ ಪ್ರಯತ್ನ ಮಾಡಿಲ್ಲ ಎಂದು ಹೇಳಿದ್ದರು. ಇದೇ ವಿಚಾರ ಇಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್ ಪಕ್ಷಗಳ ನಾಯಕರು ಟೀಕಾಪ್ರಹಾರ ಮಾಡಿದ್ದರು.

