ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಕೀಯದಲ್ಲಿ ನೇರವಾಗಿ ಹೋರಾಟ ಮಾಡುವವನು, ನಾನು ಎಂದಿಗೂ ಬೆನ್ನಿಗೆ ಚೂರಿ ಹಾಕಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಭಾನುವಾರ ಮಾತನಾಡಿದ ಅವರು, ನಾನು ಗುಂಪುಗಾರಿಕೆ ಮಾಡುವುದಿಲ್ಲ. ನಾನು ಎಂದಿಗೂ ಬೆನ್ನಿಗೆ ಚೂರಿ ಹಾಕಲ್ಲ. ದೆಹಲಿಗೆ ಹೋದರೂ ಒಬ್ಬನೇ ಹೋಗುತ್ತೇನೆ. 8-10 ಶಾಸಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬಹುದಿತ್ತು. ಅದು ದೊಡ್ಡ ವಿಚಾರವಲ್ಲ. ನಾನು ಅಧ್ಯಕ್ಷ ಸ್ಥಾನದಲ್ಲಿರುವಾಗ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. 140 ಶಾಸಕರೂ ನಮ್ಮ ನಾಯಕರೇ. ಯಾರಿಗೂ ತಾರತಮ್ಯ ಮಾಡಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.
ಹೆಚ್.ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ಜೊತೆಯಲ್ಲೇ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಕುಮಾರಸ್ವಾಮಿಯವರು ಇದನ್ನು ಒಪ್ಪದೇ ಇರಬಹುದು, ನನ್ನ ನಿಷ್ಠೆ, ನನ್ನ ಆತ್ಮಸಾಕ್ಷಿ ಆ ದೇವರಿಗೆ ಗೊತ್ತಿದೆ. ಕುಮಾರಸ್ವಾಮಿಯವರ ಸರ್ಕಾರ ಉಳಿಸಲು ಕೊನೇ ದಿನದವರೆಗೂ ಎಷ್ಟು ಪ್ರಯತ್ನ ಮಾಡಿದ್ದೇನೆ ಎಂದು ಅವರ ತಂದೆಯವರಿಗೂ ತಿಳಿದಿದೆ. ಅವರು ತಮ್ಮ ಆಸೆಗೆ ಏನಾದರೂ ಮಾತಾಡಿಕೊಳ್ಳಲಿ, ನಾನು ಬೇಸರ ಮಾಡಿಕೊಳ್ಳಲ್ಲ. ನಾನೆಂದಿಗೂ ಬೆನ್ನಿಗೆ ಚೂರಿ ಹಾಕಲ್ಲ. ನೇರವಾಗಿ ಹೋರಾಟ ಮಾಡುವವ ಎಂದು ಶಿವಕುಮಾರ್ ಖಡಕ್ ಆಗಿ ಹೇಳಿದರು.
ಯಾವುದೇ ಭಿನ್ನಾಭಿಪ್ರಾಯವಿಲ್ಲ:
“ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ರಾಜ್ಯದ ಜನ ನಮ್ಮ ಮೇಲೆ ಬಹಳ ನಿರೀಕ್ಷೆ ಹೊಂದಿದ್ದು, ನಾವು ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. 2028ರ ಚುನಾವಣೆ ನಮ್ಮ ಮುಂದಿನ ಗುರಿ ಎಂದು ಡಿಸಿಎಂ ಹೇಳಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಜೊತೆಗಿನ ಮಾತುಕತೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ ಶಿವಕುಮಾರ್, ನಾನು ಎಲ್ಲರ ಜೊತೆ ಚರ್ಚೆ ಮಾಡಿದ್ದು, ಏನು ಚರ್ಚೆ ಮಾಡಿದ್ದೇವೆ ಎಂದು ಮಾಧ್ಯಮಗಳ ಮುಂದೆ ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಸೂಪರ್ ಸಿಎಂ ಎಂಬ ಬಿಜೆಪಿ ಟೀಕೆ ಕುರಿತು ಮಾತನಾಡಿದ ಅವರು, ಬಿಜೆಪಿ ವಿರೋಧ ಪಕ್ಷವಾಗಿ ಏನಾದರೂ ಮಾತನಾಡಬೇಕಲ್ಲ?, ಬದುಕಿದ್ದೇವೆ ಎಂದು ತೋರಿಸಲು ಮಾತನಾಡುತ್ತಾರೆ. ಬಿಜೆಪಿಯವರ ಬಗ್ಗೆ ತಲೆಕೆಡಿಸಿಕೊಳ್ಳಲು ಆಗುತ್ತದೆಯೇ ಎಂದು ಶಿವಕುಮಾರ್ ತಿರುಗೇಟು ಕೊಟ್ಟರು.
ಸರ್ವಪಕ್ಷ ಸಭೆ:
ಕೇಂದ್ರ ಸಚಿವರು, ಸಂಸದರ ಭೇಟಿಯ ಹೊರತಾಗಿ ಪಕ್ಷ ಹಾಗೂ ರಾಜಕೀಯ ಉದ್ದೇಶದಿಂದ ದೆಹಲಿ ಪ್ರಯಾಣ ಮಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ನಾನು ಮತ್ತು ಸಿಎಂ ಈಗ ಚರ್ಚೆ ಮಾಡಿದ್ದು, ಮುಂದೆಯೂ ಮಾತನಾಡುತ್ತೇವೆ. ನೀರಾವರಿ, ಮೆಕ್ಕೆಜೋಳ ಹಾಗೂ ಕಬ್ಬು ಬೆಳೆ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತುವ ಬಗ್ಗೆ ಸಂಸದರ ಜೊತೆ ಚರ್ಚೆ ಮಾಡಬೇಕು. ಸರ್ವಪಕ್ಷ ಸಭೆ ಕರೆಯಬೇಕಿದ್ದು, ಈ ಸಭೆಯಲ್ಲಿ ಎಲ್ಲ ಸಂಸದರು ಭಾಗವಹಿಸಬೇಕು. ಹೀಗಾಗಿ ಸಭೆಯನ್ನು ದೆಹಲಿಯಲ್ಲಿ ಮಾಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಸಿಎಂ ಏನು ಹೇಳುತ್ತಾರೆ ಕೇಳುತ್ತೇನೆ. ನಾನೊಬ್ಬನೇ ಹೋಗಿ ಎಲ್ಲರ ಸಭೆ ಮಾಡುವುದು ಸರಿಯಲ್ಲ. ಸಭೆಯಲ್ಲಿ ರಾಜ್ಯದ ಇತರ ಸಚಿವರೂ ಇರಬೇಕು ಎಂದು ಕುಮಾರಸ್ವಾಮಿ ತಿಳಿಸಿದರು.
ಭೇಟಿಗೆ ಅರ್ಜಿ ಹಾಕಿಕೊಳ್ಳಬೇಕೇ?:
ದೆಹಲಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಕುರಿತು ಕೇಳಲಾದ ಪ್ರಶ್ನೆಗೆ, ನೀವು ಅಪ್ಪ ಮಗನ ಭೇಟಿಗೂ ಅರ್ಥ ಕಲ್ಪಿಸುತ್ತೀರಾ? ಅಪ್ಪ, ಮಕ್ಕಳ ಭೇಟಿಗೂ ಅರ್ಜಿ ಹಾಕಿಕೊಳ್ಳಬೇಕಾ? ಪ್ರಿಯಾಂಕ್ ಖರ್ಗೆ ಅವರು ಎಐ ತಂತ್ರಜ್ಞಾನದ ಅತ್ಯುತ್ತಮ ಸಾಧನ ಪರಿಚಯಿಸಿದ್ದಾರೆ. ಇದರ ಉದ್ಘಾಟನೆಗೆ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿದೆವು. ಅವರು ಬರಲು ಆಗಿರಲಿಲ್ಲ. ಹೀಗಾಗಿ ರಾಹುಲ್ ಗಾಂಧಿ ಅವರು ಅದರ ಬಗ್ಗೆ ಮಾಹಿತಿ ಪಡೆಯಲು ಕರೆದಿದ್ದರು. ಹೀಗಾಗಿ ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡ ಅವರನ್ನು ಕರೆಸಿ ಅವರಿಂದ ಮಾಹಿತಿ ಪಡೆದಿದ್ದಾರೆ. ಇಲ್ಲೂ ರಾಜಕೀಯ ಮಾತನಾಡಿದ್ದಾರೆ ಎಂದು ಹೇಳಲು ಸಾಧ್ಯವೇ? ಅಪ್ಪ ಮಕ್ಕಳು, ಅಣ್ಣ ತಮ್ಮ ಸೇರಿದಾಗ ರಾಜಕೀಯವೇ? ಬೇರೆಯವರು ಸೇರಿದಾಗ ನಿಮಗೆ ಲೆಕ್ಕಕ್ಕೆ ಇರುವುದಿಲ್ಲ. ನಮ್ಮದು ಮಾತ್ರ ಲೆಕ್ಕ ಹಾಕುತ್ತೀರಿ ಎಂದು ಮಾಧ್ಯಮಗಳ ಕುರಿತು ಪ್ರಶ್ನಿಸುವ ದಾಟಿಯಲ್ಲಿ ಹೇಳಿದರು. ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾದರೆ “ನಾನು ಅದನ್ನು ಸ್ವಾಗತಿಸುತ್ತೇನೆ ಎಂದು ತಿಳಿಸಿದರು.
ಮನಶಾಂತಿಗಾಗಿ ಭೇಟಿ:
ತಾವುಗಳು ದೇವಸ್ಥಾನಗಳಿಗೆ ಭೇಟಿ ಮಾಡುತ್ತಿದ್ದು ಏನು ಸಂಕಲ್ಪ ಮಾಡಿದ್ದೀರಿ ಎನ್ನುವ ಪ್ರಶ್ನೆಗೆ, ನಾವು ನಮ್ಮ ಬದುಕಿನಲ್ಲಿ ನಮ್ಮದೇ ಆದ ಆಚರಣೆಗಳ ಹಿಂದಿರುತ್ತೇವೆ. ನಮ್ಮ ಮನಶಾಂತಿಗಾಗಿ ನಮ್ಮ ಕೆಲಸ ಮಾಡುತ್ತೇವೆ. ದೇವಾಲಯ, ಮಸೀದಿ, ಚರ್ಚ್, ಜೈನ ಬಸದಿಗೆ ಹೋಗಿ ಪೂಜೆ ಪ್ರಾರ್ಥನೆ ಸಲ್ಲಿಸುತ್ತೇವೆ. ಇದನ್ನು ಟೆಂಪಲ್ ರನ್ ಎನ್ನುವ ಅಗತ್ಯವೇನು? ನಮ್ಮ ಹಿರಿಯರು ಕೊಟ್ಟ ಮಾರ್ಗದರ್ಶನದ ಪ್ರಕಾರ ನಾನು ನಿತ್ಯ ಬೆಳಗ್ಗೆ ಪೂಜೆ ಮಾಡದೇ ಮನೆಯಿಂದ ಆಚೆ ಬರುವುದಿಲ್ಲ. ಸರ್ಕಾರ ದೇವಾಲಯ ಮುಚ್ಚಲು ಸಾಧ್ಯವೇ? ಗ್ರಾಮೀಣ ಭಾಗದ ದೇವಾಲಯ ಅಭಿವೃದ್ಧಿಗೆ ಬಂಗಾರಪ್ಪನವರ ಕಾಲದಲ್ಲಿ ಆರಾಧನಾ ಯೋಜನೆ ಜಾರಿಗೆ ತಂದಿದ್ದರು ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಕುಮಾರಸ್ವಾಮಿ ಅವರಿಗೆ ಯಾರ ಬೆಂಬಲವೂ ಬೇಕಿಲ್ಲ:
ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಬಹಳ ದೊಡ್ಡವರು, ಅವರು ಯಾರ ಬೆಂಬಲವನ್ನೂ ಪಡೆಯುವುದಿಲ್ಲ, ಒಕ್ಕಲಿಗರ ಮಠ, ಒಕ್ಕಲಿಗರ ಸಂಘ, ಒಕ್ಕಲಿಗ ಜಾತಿಯನ್ನು ಎಂದೂ ಉಪಯೋಗಿಸಿಕೊಂಡಿಲ್ಲ. ಪಾಪ, ಕುಮಾರಣ್ಣನಿಗೆ ಒಕ್ಕಲಿಗರ ಎರಡನೇ ಮಠ ಹೇಗಾಯ್ತು ಎಂಬುದು ಗೊತ್ತಿಲ್ಲವೇ? ಅದನ್ನು ಕಟ್ಟಿದವರು ಯಾರು? ಒಕ್ಕಲಿಗ ಮಠದ ಹಿರಿಯ ಸ್ವಾಮೀಜಿಗಳು ಇಲ್ಲದಿದ್ದರೆ ದೇವೇಗೌಡರು ಸಿಎಂ ಆಗುತ್ತಿದ್ದರೇ? ಅಂದು ದೇವೇಗೌಡರ ಪರ ಸ್ವಾಮೀಜಿಗಳು ರಸ್ತೆಗೆ ಇಳಿಯಲಿಲ್ಲವೇ? ಸದಾನಂದ ಗೌಡರಿಗೆ ತೊಂದರೆ ಆದಾಗ ಸ್ವಾಮೀಜಿಗಳು ಸುಮ್ಮನೆ ಕೂತಿದ್ದರಾ? ಕೆಲವು ಸಂದರ್ಭದಲ್ಲಿ ಸ್ವಾಮೀಜಿಗಳು ಮಾತನಾಡುತ್ತಾರೆ. ಅದರಲ್ಲಿ ತಪ್ಪೇನಿದೆ? ಬೇರೆ ಸಂದರ್ಭದಲ್ಲಿ ಸ್ವಾಮೀಜಿಗಳು ಮಾತನಾಡಿದಾಗ ನಾನು ಬೇಸರ ಮಾಡಿಕೊಂಡಿದ್ದೇನಾ?” ಎಂದು ತಿರುಗೇಟು ನೀಡಿದರು.
ಸ್ವಾಮೀಜಿ ಬೆಂಬಲ ಕೇಳಿಲ್ಲ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಸ್ವಾಮೀಜಿ ಬೆಂಬಲ ನಾನು ಕೇಳಿದ್ದೇನಾ? ನಾನು ಕೂಡ ಯಾರ ಬೆಂಬಲವನ್ನೂ ಕೇಳಿಲ್ಲ. ಅವರು ಪ್ರೀತಿಯಿಂದ ಮಾತಾಡಿದರೆ ಬೇಡ ಎನ್ನಲು ಸಾಧ್ಯವೇ? ನಾನು ಒಂದು ಸಮುದಾಯದಲ್ಲಿ ಹುಟ್ಟಿದ್ದರೂ ಎಲ್ಲಾ ಸಮುದಾಯಗಳನ್ನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ. ಬಾಳೆಹೊನ್ನೂರು ಸ್ವಾಮಿಜಿ, ಶ್ರೀಶೈಲ ಸ್ವಾಮೀಜಿಗಳು ಸೇರಿದಂತೆ ಸಾಕಷ್ಟು ಸ್ವಾಮೀಜಿಗಳು ನನ್ನ ಪರ ಮಾತನಾಡಿದ್ದಾರೆ. ನನ್ನ ಮೇಲೆ ಅವರಿಗೆ ಪ್ರೀತಿ, ವಿಶ್ವಾಸ ಇದೆ. ಹೀಗಾಗಿ ಮಾತನಾಡಿದ್ದಾರೆ. ಜೈನ ಸ್ವಾಮೀಜಿಗಳೂ ಕೂಡ ದೊಡ್ಡ ಸಮಾವೇಶದಲ್ಲಿ ಬಹಿರಂಗವಾಗಿ ಆಶೀರ್ವಾದ ಮಾಡಿದರು. ಧರ್ಮಸ್ಥಳಕ್ಕೆ ಹೋದಾಗಲೂ ನನಗೆ ಬೆಂಬಲ ನೀಡಿದರು. ಅದನ್ನು ತಪ್ಪು ಎಂದು ಹೇಳಲು ಸಾಧ್ಯವೇ ಎಂದು ಡಿಕೆ ಶಿವಕುಮಾರ್ ತೀಕ್ಷ್ಣವಾಗಿ ಪ್ರಶ್ನಿಸಿದರು.

