ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಂದು ಸಂವಿಧಾನ ಜಾರಿಯಾದಂತಹ ದಿನ, ಒಕ್ಕೂಟ ವ್ಯವಸ್ಥೆ ಜಾರಿಯಾದ ಪವಿತ್ರ ದಿನ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮ ಸಮಾಜ ನಿರ್ಮಾಣದ ಆಶಯದೊಂದಿಗೆ ಸಂವಿಧಾನವನ್ನು ರಚಿಸಿದರು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಂವಿಧಾನವನ್ನು ಇದೇ ದಿನದಂದು ಅಂಗೀಕರಿಸಲಾಯಿತು. ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನ 100 ವರ್ಷಗಳನ್ನು ಪೂರೈಸಿದರೆ, ಸಂವಿಧಾನ ಜಾರಿಯಾಗಿ 75 ವರ್ಷಗಳುತುಂಬಿದೆ. ಈ ಮಹತ್ವದ ಸಂದರ್ಭವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ನಡೆಸಲಾಯಿತು. ಈ ಕಾರ್ಯಕ್ರಮವನ್ನು ರಾಜ್ಯದೆಲ್ಲೆಡೆ ವರ್ಷಾದ್ಯಂತ ನಡೆಸಲು ನಿರ್ಧರಿಸಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ಮುಖ್ಯಮಂತ್ರಿ, ಡಿಸಿಎಂ ಡಿ.ಕೆ ಶಿವಕುಮಾರ್, ಸೇರಿದಂತೆ ಮತ್ತಿತರ ನಾಯಕರು ಜೊತೆಗಿದ್ದರು. ಇದೇ ವೇಳೆ ಎಲ್ಲ ಕಾಂಗ್ರೆಸ್ ನಾಯಕರು ಸಂವಿಧಾನ ಜಾರಿಯಾದ ಈ ಐತಿಹಾಸಿಕ ದಿನದಂದು ಅದರ ಮೌಲ್ಯಗಳನ್ನು ಎತ್ತಿಹಿಡಿಯುವ ಪಣ ತೊಡೋಣ ಎಂದು ಕರೆ ನೀಡಿದರು.

