ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅನುದಿನವೂ ನಡೆಯಲಿದೆ ಕೆಂಪೇಗೌಡರ ಇತಿಹಾಸದ ಸ್ಮರಣೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ಅಪ್ರತಿಮ ಆಡಳಿತಗಾರ, ಸರ್ವ ಜನಾಂಗದ ನಾಯಕ ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯುತ್ಸವದ ಪ್ರಯುಕ್ತ ಶುಕ್ರವರ ಸುಮನಹಳ್ಳಿ ವೃತ್ತದ ಬಳಿ, 5 ಎಕರೆ ಜಾಗದಲ್ಲಿ ಕೆಂಪೇಗೌಡ ಭವನದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, 7 ಗಡಿಗೋಪುರಗಳು ಹಾಗೂ ಐತಿಹಾಸಿಕ ಸ್ಥಳಗಳಿಂದ ಆಗಮಿಸಿದ ಪುರಜ್ಯೋತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಪೂಜ್ಯ ಮಠಾಧೀಶರುಗಳ ದಿವ್ಯ ಸಾನಿಧ್ಯದಲ್ಲಿ ಸ್ವೀಕರಿಸಿ ಅವರು ಮಾತನಾಡಿದರು.
ಯುಗಪುರುಷ ನಾಡಪ್ರಭು ಕೆಂಪೇಗೌಡರು ನಮಗೆಲ್ಲಾ ಆದರ್ಶ!
ಧರ್ಮವೀರ, ಸಾವಿರ ಕೆರೆಗಳ ಸರದಾರ, ಬೆಂಗಳೂರೆಂಬ ಮಹಾನಗರಿಯನ್ನು ವಿಜಯನಗರ ಸಾಮ್ರಾಜ್ಯದಂತೆ ಸಂಪದ್ಭರಿತವಾಗಿ ನಿರ್ಮಿಸಲು ಪಣ ತೊಟ್ಟ ದಾರ್ಶನಿಕ, ನಾಡಪ್ರಭು ಕೆಂಪೇಗೌಡರು ಎಂದು ಡಿಸಿಎಂ ತಿಳಿಸಿದರು. ಕೆಂಪೇಗೌಡರ ದಕ್ಷ ಆಡಳಿತ ಹಾಗೂ ಅಭಿವೃದ್ಧಿ ಮಾದರಿಯು ಸದಾ ನಮ್ಮ ಸರ್ಕಾರಕ್ಕೆ ಸ್ಫೂರ್ತಿಯಾಗಿದೆ. ಬೆಂಗಳೂರನ್ನು ವ್ಯಾಪಾರೋದ್ಯಮಗಳ ಕೇಂದ್ರವಾಗಿ, ಸರ್ವಜನಾಂಗದ ಶಾಂತಿಯ ತೋಟವಾಗಿ, ಜಲಸಮೃದ್ಧ ನಗರವಾಗಿ ನಿರ್ಮಿಸಿದ ಆ ಮಹಾನ್ ಚೇತನಕ್ಕೆ ಸಾವಿರದ ಶರಣು ಎಂದು ಡಿಕೆ ಶಿವಕುಮಾರ್ ಸ್ಮರಿಸಿದರು.
ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರ ಇಂದು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಕೆಂಪೇಗೌಡರು ಈ ನಾಡಿಗೆ ನೀಡಿದ ಅಮೂಲಾಗ್ರ ಕೊಡುಗೆಗಳನ್ನು ಗೌರವಿಸಿ, ಅವರ ಸ್ಮರಣಾರ್ಥ ಕಾಂಗ್ರೆಸ್ ಸರ್ಕಾರವು ಇಲ್ಲಿಯವರೆಗೂ ಅನೇಕ ಅಭಿವೃದ್ಧಿ ಯೋಜನೆಗಳು, ಸರ್ವರಿಗೂ ಒಳಿತಾಗುವಂಥ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಅದರ ಒಂದು ಕಿರುನೋಟ ಇಲ್ಲಿದೆ ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.

