ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೇಕೆದಾಟು, ಮಹದಾಯಿ ಮತ್ತು ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗಳ ಅನುಮತಿ, ಅನುಷ್ಟಾನ ಕುರಿತು ಚರ್ಚಿಸಲು ಇದೇ 25 ರಂದು ಕೇಂದ್ರ ಜಲಶಕ್ತಿ ಸಚಿವರನ್ನು ಜಲ ಸಂಪನ್ಮೂಲ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿಯಾಗಲು ದೆಹಲಿಗೆ ತೆರಳಲಿದ್ದಾರೆ.
ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಮತ್ತು ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ನೀರಾವರಿ ಯೋಜನೆಗಳಿಗೆ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ. ರಾಜಸ್ತಾನದ ಉದಯಪುರದಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯ ಏರ್ಪಡಿಸಿದ್ದ ಅಖಿಲ ಭಾರತ ನೀರಾವರಿ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಭೇಟಿಗೆ ವಿನಂತಿಸಿ ಸಮಯಾವಕಾಶ ಅಂತಿಮಗೊಳಿಸಿದ್ದಾಗಿ ಡಿಸಿಎಂ ಶಿವಕುಮಾರ್ ತಿಳಿಸಿದ್ದಾರೆ.
ಫೆ.25 ರಂದು ಕೇಂದ್ರ ಜಲಶಕ್ತಿ ಸಚಿವರು ದೆಹಲಿಯಲ್ಲಿ ಭೇಟಿಗೆ ಕಾಲಾವಕಾಶ ಕೊಟ್ಟಿದ್ದಾರೆ. ಈ ಸಂದರ್ಭವನ್ನು ಸದುಪಯೋಗಪಡಿಸಿಕೊಂಡು ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಮೇಕೆದಾಟು ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವ ವಿಶ್ವಾಸವಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಮ್ಮಲ್ಲಿರುವ ಸಮಸ್ಯೆಗಳನ್ನು ಅರಿತು, ಅವುಗಳನ್ನು ಕೇಂದ್ರ ಜಲಶಕ್ತಿ ಸಚಿವಾಲಯದ ಮುಂದೆ ಇಡಬಹುದಾಗಿದೆ. ನೀರನ್ನು ಹೇಗೆ ಸಂರಕ್ಷಿಸಬೇಕು, ಮರುಬಳಕೆ ಮಾಡಬೇಕು. ಎಂಬುದು ಈ ಸಮ್ಮೇಳನದ ಉದ್ದೇಶವಾಗಿದೆ. ನಮ್ಮ ಯೋಜನೆಗಳನ್ನು ರಾಜಕೀಯ ಉದ್ದೇಶದಿಂದ ನೋಡಬೇಡಿ, ಸಮಸ್ಯೆಗಳನ್ನು ಬಗೆಹರಿಸಬೇಕು. ರಾಜ್ಯಗಳ ನಡುವಣ ಬಿಕ್ಕಟ್ಟನ್ನು ಕೇಂದ್ರ ಸರ್ಕಾರ ಬಗೆಹರಿಸಬೇಕು ಎಂದು ಡಿಸಿಎಂ ಡಿಕೆಶಿ ಮಾಧ್ಯಮಗಳ ಜೊತೆ ಮಾತನಾಡುವಾಗ ತಿಳಿಸಿದರು.
ಆಂಧ್ರ, ತೆಲಂಗಾಣ ಜೊತೆ ಚರ್ಚೆ:
ಉದಯಪುರದಲ್ಲಿನ ನೀರಾವರಿ ಸಚಿವರ ಸಮ್ಮೇಳನದ ವೇಳೆ ಆಂಧ್ರಪ್ರದೇಶ ಹಾಗೂ ತೆಲಂಗಾಣದ ನೀರಾವರಿ ಸಚಿವರ ಜತೆ ತುಂಗಭದ್ರಾ ನದಿ ನೀರಿನ ಬಳಕೆ ಚರ್ಚೆ ನಡೆಸಲಾಗಿದೆ. ತುಂಗಭದ್ರಾ ನದಿಯಲ್ಲಿ 30 ಟಿಎಂಸಿ ನೀರನ್ನು ಉಳಿಸಿ, ಸದ್ಬಳಕೆ ಮಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ಮಾಡಲು ವಿಜಯವಾಡಕ್ಕೆ ಹೋಗಿ ಮತ್ತೊಮ್ಮ ಚರ್ಚೆ ಮಾಡುವುದಾಗಿ ತಿಳಿಸಿದ ಡಿಕೆಶಿ, ಇದಕ್ಕಾಗಿ ಮೂರು ರಾಜ್ಯಗಳು ಸೇರಿ ಕಾರ್ಯತಂತ್ರ ರೂಪಿಸಬೇಕಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರವಾಗಿ ನವಲಿಯಲ್ಲಿ ಆಣೆಕಟ್ಟು ನಿರ್ಮಾಣ ಸಂಬಂಧ ಆಂಧ್ರಪ್ರದೇಶದ ಜಲಸಂಪನ್ಮೂಲ ಸಚಿವರಾದ ನಿರ್ಮಲಾ ರಾಮಾ ನಾಯ್ಡು ಹಾಗೂ ತೆಲಂಗಾಣದ ಜಲಸಂಪನ್ಮೂಲ ಸಚಿವರಾದ ಉತ್ತಮ ಕುಮಾರ್ ರೆಡ್ಡಿ ಜತೆ ಪ್ರತ್ಯೇಕವಾಗಿ ಡಿಸಿಎಂ ಡಿಕೆಶಿ ಚರ್ಚೆ ನಡೆಸಿದರು. ಈ ವೇಳೆ ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಸಹ ಉಪಸ್ಥಿತರಿದ್ದು ಚರ್ಚೆಯಲ್ಲಿ ಪಾಲ್ಗೊಂಡರು.
ದೇಶದ ಪ್ರಮುಖ ನೀರಾವರಿ ಕ್ಷೇತ್ರವಾಗಿದೆ. ರೈತರು, ಕೈಗಾರಿಕೆಗಳು, ಕುಡಿಯುವ ನೀರು ಹಾಗೂ ನಗರೀಕರಣಕ್ಕೆ ನೀರಾವರಿ ಯೋಜನೆ ಅಗತ್ಯವಾಗಿದೆ. ಹೀಗಾಗಿ ಜಲಶಕ್ತಿ ಸಚಿವಾಲಯ ದೇಶದಲ್ಲಿ ಸ್ಪಷ್ಟವಾದ ನೀಲನಕ್ಷೆ ಹಾಗೂ ಮಾರ್ಗಸೂಚಿ ರೂಪಿಸಬೇಕಿದೆ. ಜತೆಗೆ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಡಿಕೆಶಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.