ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಮನಗರದ ಜೂನಿಯರ್‌ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ದಿ. ಶ್ರೀ ಡಿ ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿದರು. ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಎಂದೇ ಹೆಸರುವಾಸಿಯಾಗಿದ್ದ ದೇವರಾಜ ಅರಸು ಅವರು ಪ್ರತಿಯೊಬ್ಬ ರಾಜಕಾರಣಿಗೂ ಮಾದರಿಯಾಗಿದ್ದಾರೆ.
ಭೂಸುಧಾರಣೆ ಹಾಗೂ ಉಳುವವನೆ ಭೂಮಿಯ ಒಡೆಯ ಕಾನೂನನ್ನು ಜಾರಿಗೆ ತಂದು ಬಡವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಿದವರು. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಅನೇಕ ಕ್ರಾಂತಿಕಾರಿ ಯೋಜನೆಗಳನ್ನು ಜಾರಿ ತಂದು ಸಮಾಜದ ಕ್ಷೇಮಾಭಿವೃದ್ಧಿಗೆ ಶ್ರಮಿಸಿದ ಧೀಮಂತ ನಾಯಕರಿಗೆ ಪಾದಾಭಿವಂದನೆಗಳನ್ನು ಸಲ್ಲಿಸುತ್ತೇನೆಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ದೇವರಾಜು ಅರಸು ಅವರು ಬಡಜನರ ಬದುಕು ಬದಲಾವಣೆ ಮಾಡುವ ಕಾರ್ಯಗಳನ್ನು ಮಾಡಿದ್ದರು. ಅರಸು ಕಾಲದಲ್ಲಿ ಉಳುವವನಿಗೆ ಭೂಮಿ ಕೊಟ್ಟರು, ಜಾಗ ಕೊಟ್ಟರು, ವೃದ್ಧಾಪ್ಯ ವೇತನ ಕೊಟ್ಟರು.

ನನ್ನ ಕ್ಷೇತ್ರದಲ್ಲಿ 8000 ಸಾವಿರ ಜನರಿಗೆ ಜಮೀನು ಕೊಟ್ಟಿದ್ದೇವೆ. ಈಗ ಅದರ ಜವಾಬ್ದಾರಿಯನ್ನು ಡಿ.ಕೆ ಸುರೇಶ್‌ಅವರಿಗೆ ವಹಿಸಿದ್ದೇನೆ. ಅಧಿಕಾರವನ್ನು ಬಡಜನರ ಅಭಿವೃದ್ಧಿಗಾಗಿ ಬಳಸಬೇಕು, ಕನಕಪುರದಲ್ಲಿ ನೂರು ಎಕರೆ ಜಾಗವನ್ನು ಬಡವರ ಸೈಟ್‌ಗಾಗಿ ಹಂಚಿದ್ದೇನೆ. ನಾನೇ ಕುಳಿತುಕೊಂಡು, ಹೆಣ್ಣುಮಕ್ಕಳ ಹೆಸರಿಗೆ ಸೈಟ್‌ಬರೆದು ಕೊಟ್ಟಿದ್ದೇನೆ ಎಂದು ಡಿಸಿಎಂ ತಿಳಿಸಿದರು.
ರಾಮನಗರದ ಶಾಸಕರಾದ ಇಕ್ಬಾಲ್‌ಹುಸೇನ್‌ಅವರು, ಮಾಗಡಿ ಶಾಸಕರಾದ ಹೆಚ್.ಸಿ ಬಾಲಕೃಷ್ಣ ಅವರು, ಚನ್ನಪಟ್ಟಣ ಶಾಸಕರಾದ ಸಿ.ಪಿ ಯೋಗೇಶ್ವರ್‌ಅವರೊಂದಿಗೆ ಸೇರಿ ರಾಮನಗರದಲ್ಲಿ 100 ಎಕರೆಯಲ್ಲಿ ಸೈಟ್‌ಹಂಚುವ ಕೆಲಸ ಮಾಡಬೇಕು ಎಂದು ಸಿಎಂ ಜೊತೆಗೆ ಚರ್ಚೆ ನಡೆಸಿದ್ದೇವೆ ಎಂದು ಡಿಸಿಎಂ ಡಿಕೆಶಿ ತಿಳಿಸಿದರು.
ನಾನು ಈ ಭೂಮಿಯಲ್ಲಿ ಹುಟ್ಟಿದ್ದೀನಿ, ಈ ಭೂಮಿಯಲ್ಲಿ ಬದುಕಿದ್ದೀನಿ, ಇದೇ ಭೂಮಿಯಲ್ಲಿ ಸಾಯ್ತೀನಿ. ಅರಸು ಅವರ ಹಾದಿಯಲ್ಲೇ ನಾವೆಲ್ಲರೂ ನಡೆಯಬೇಕಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

