ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು-ಜಪಾನ್ ನ ಒಸಾಕಾ, ನಗೋಯಾಗೆ ನೇರ ವಿಮಾನ ಸೇವೆ ಆರಂಭಿಸಲು ಚರ್ಚೆ ಮಾಡಲಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಜಪಾನ್ ಕಾನ್ಸುಲ್ ಜನರಲ್ NakaneTsutomu ಅವರೊಂದಿಗೆ ಬಂಡವಾಳ ಹೂಡಿಕೆ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಬಂಧ, ಜಪಾನಿ ಭಾಷಾ ಕಲಿಕೆ, ಕೌಶಲ್ಯ ಅಭಿವೃದ್ಧಿ ಮುಂತಾದ ನವೀನ ಉಪಕ್ರಮಗಳನ್ನು ಜಾರಿಗೆ ತರುವುದರ ಕುರಿತು ಸಹ ಸಂವಾದ ನಡೆಸಲಾಯಿತು ಎಂದು ಪಾಟೀಲ್ ತಿಳಿಸಿದರು.
ಕರ್ನಾಟಕವನ್ನು ಹೂಡಿಕೆ, ಉದ್ಯೋಗ ಮತ್ತು ಅಂತಾರಾಷ್ಟ್ರೀಯ ಬಂಡವಾಳದ ಪ್ರಮುಖ ಕೇಂದ್ರವಾಗಿ ರೂಪಿಸುವ ನಮ್ಮ ಉದ್ದೇಶಕ್ಕೆ ಇದು ಮತ್ತೊಂದು ಹೆಜ್ಜೆ.
ಸದ್ಯ, ಬೆಂಗಳೂರಿನಿಂದ ಟೋಕಿಯೋಗೆ ಮಾತ್ರ ನೇರ ವಿಮಾನ ಸೌಲಭ್ಯವಿದೆ. ಈ ವರ್ಷದ ಫೆಬ್ರವರಿಯಲ್ಲಿ ನಡೆದ #GIM2025 ಸಮಾವೇಶದಲ್ಲಿ ಜಪಾನಿನ ಕಂಪನಿಗಳು ಡೇಟಾ ಸೆಂಟರ್, ಉತ್ಪಾದನೆ, ಲಾಜಿಸ್ಟಿಕ್ಸ್ ವಲಯಗಳಲ್ಲಿ ರೂ. 7,500 ಕೋಟಿಗಳಿಗಿಂತ ಹೆಚ್ಚಿನ ಹೂಡಿಕೆಗೆ ಒಪ್ಪಂದಗಳಾಗಿದ್ದು, ಅಲ್ಲಿನ ಕೈಗಾರಿಕಾ ನಗರಗಳಾದ ಒಸಾಕಾ ಮತ್ತು ನಗೋಯಾಗೆ ನಮ್ಮಲ್ಲಿಂದ ನೇರ ವಿಮಾನ ಸೇವೆ ಆರಂಭಿಸಬೇಕಾದ ಅಗತ್ಯವಿರುವುದರ ಕುರಿತು ಸಹ ಚರ್ಚಿಸಿದೆವು.
ನೇರ ವಿಮಾನ ಸೇವೆ, ಮುಂತಾದ ನವೀನ ಉಪಕ್ರಮಗಳು ಜಪಾನ್ ಮತ್ತು ಕರ್ನಾಟಕದ ಬಾಂಧವ್ಯ ಗಟ್ಟಿಗೊಳಿಸಿ, ವಾಣಿಜ್ಯಾಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

