ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಅಧಿಕಾರ ಶಾಶ್ವತವಲ್ಲ. ಇದ್ದಾಗ ಎಲ್ಲರ ನೆನಪಿನಲ್ಲಿ ಉಳಿಯುವಂತ ಕೆಲಸ ಮಾಡಬೇಕೆಂಬ ಜಾಯಮಾನ ನನ್ನದು ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮದ ಹತ್ತಿರ ಒಂದು ಕೋಟಿ ರೂ.ವೆಚ್ಚದಲ್ಲಿ ಕೆರೆ ಅಭಿವೃದ್ದಿ ಕಾಮಗಾರಿಗೆ ಗುರುವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು. ರೈತರಿಗೆ ನೀರು ವಿದ್ಯುತ್ ಎರಡು ಅತಿ ಮುಖ್ಯವಾಗಿ ಬೇಕಾಗಿರುವುದರಿಂದ ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ ಐದು ನೂರು ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸುತ್ತಿದ್ದೇನೆ. ಜೋಗ್‌ಫಾಲ್ಸ್‌ನಿಂದ ಇಲ್ಲಿಗೆ ನೇರವಾಗಿ ವಿದ್ಯುತ್ ಪೂರೈಕೆಯಾಗಲಿದೆ. ಇದರಿಂದ ಇನ್ನು ನೂರು ವರ್ಷಗಳ ಕಾಲ ವಿದ್ಯುತ್ ಸಮಸ್ಯೆ ರೈತರನ್ನು ಕಾಡುವುದಿಲ್ಲ ಎಂದರು.
ಹಿರಿಯೂರಿನ ವಾಣಿವಿಲಾಸಸಾಗರದ ಮಧ್ಯೆ ನಲವತ್ತು ಅಡಿ ಆಳದಲ್ಲಿ ಪಿಲ್ಲರ್ ಎತ್ತಿ ಮೋಟಾರ್ ಕೂರಿಸಿ ೬೭ ಕೋಟಿ ರೂ.ವೆಚ್ಚದಲ್ಲಿ ಫಿಲ್ಟರ್ ಅಳವಡಿಸಿ ತಾಲ್ಲೂಕಿನ ಪ್ರತಿ ಹಳ್ಳಿಯಲ್ಲಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಇನ್ನು ನಾಲ್ಕೈದು ತಿಂಗಳಲ್ಲಿ ಪೂರೈಕೆಯಾಗಲಿದೆ.
ಕ್ಷೇತ್ರಾದ್ಯಂತ ಕೆರೆ ತುಂಬಿಸುವ ಯೋಜನೆ, ಗುಣ ಮಟ್ಟದ ಆಸ್ಪತ್ರೆ, ಶಾಲಾ-ಕಾಲೇಜು, ಸಿ.ಸಿ.ರಸ್ತೆಗಳನ್ನು ನಿರ್ಮಿಸಿದ್ದೇನೆ. ವೈದ್ಯರುಗಳು ಬೇರೆ ಊರಿನಿಂದ ಬರುವುದು ಕಷ್ಟವಾಗುತ್ತದೆಂದು ವಸತಿ ಗೃಹಗಳನ್ನು ಕಟ್ಟಿಸಿದ್ದೇನೆ. ಯಾರಿಂದಲೂ ಏನನ್ನು ಹೇಳಿಸಿಕೊಳ್ಳದೆ ಎಲ್ಲಿ ಏನು ಅಗತ್ಯವಿದೆ ಎನ್ನುವುದನ್ನು ಮನಗಂಡು ಹಗಲು-ರಾತ್ರಿ ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆಂದು ತಿಳಿಸಿದರು.
೩೧ ವರ್ಷಗಳ ಹಿಂದೆ ಪ್ರಥಮ ಬಾರಿಗೆ ಭರಮಸಾಗರ ವಿಧಾನಸಭೆಯಿಂದ ಸ್ಪರ್ಧಿಸಿ ಶಾಸಕನಾದವನು. ಹೊಳಲ್ಕೆರೆಯಲ್ಲಿ ಮೂರು ಬಾರಿ ನನ್ನನ್ನು ಗೆಲ್ಲಿಸಿ ಅಧಿಕಾರ ಕೊಟ್ಟಿದ್ದೀರ. ನಿಮ್ಮಗಳ ಋಣ ನನ್ನ ಮೇಲಿದೆ. ಸಾಸಲು ಹಳ್ಳದಿಂದ ಹಿರೇಬೆನ್ನೂರು ಸರ್ಕಲ್‌ರವರೆ ರಸ್ತೆಗೆ ನೂರು ಕೋಟಿ ರೂ.ಗಳನ್ನು ನೀಡಿದ್ದೇನೆ.
ಸಾಸ್ವೆಹಳ್ಳಿ ಬಳಿ ಸೇತುವೆಗೆ ಐದು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದೇನೆ. ಹೊಳಲ್ಕೆರೆಯಲ್ಲಿ ಹೈಟೆಕ್ ಆಸ್ಪತ್ರೆ ಕಟ್ಟಿಸಿದ್ದೇನೆ. ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಬಡ ರೋಗಿಗಳಿಗೆ ಅನುಕೂಲವಾಗಲಿ ಎನ್ನುವುದು ನನ್ನ ಉದ್ದೇಶ ಎಂದು ನುಡಿದರು.
ಹೊಳಲ್ಕೆರೆ ಬಿಜೆಪಿ.ಮಂಡಲ ಮಾಜಿ ಅಧ್ಯಕ್ಷ ಸಿದ್ದೇಶ್, ಶರಣಪ್ಪ, ಸಿದ್ದೇಶಪ್ಪ, ಕುಮಾರ್, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ನವೀನ್ ಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿದ್ದರು.