ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಯ ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮವು ಯೋಜನೆಯ ಪಾಲುದಾರ ಸದಸ್ಯರ ಕುಟುಂಬದ ವಿದ್ಯಾರ್ಥಿಗಳಿಗೆ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣಕ್ಕೆ ನೆರವಾಗುವಲ್ಲಿ ಯಶಸ್ವಿಯಾಗಿದ್ದು, ನಮ್ಮ ಯೋಜನಾ ಕಛೇರಿ ವ್ಯಾಪ್ತಿಯ ಒಟ್ಟು 176 ಅರ್ಹ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ವಿತರಣೆ ಮಾಡಲಾಗಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಉಮಾರಬ್ಬ ತಿಳಿಸಿದರು.
ನಗರದ ಕನ್ನಡ ಜಾಗೃತಿ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಸುಜ್ಞಾನ ಶಿಷ್ಯವೇತನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಯೋಜನೆ ಮುಖಾಂತರ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗುತ್ತಿದ್ದೂ, ಪ್ರತಿ ಯೋಜನೆಯನ್ನು ಅಚ್ಚುಕಟ್ಟಾಗಿ ಜನಸಾಮನ್ಯರಿಗೆ ತಲುಪಿಸುವ ಕಾರ್ಯ ನಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ.
ನಮ್ಮ ಸಂಘದ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಪ್ರತಿ ತಿಂಗಳೂ 94 000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಲಾಗುತ್ತಿದೆ. ಯೋಜನೆಯ ಈ ಆರ್ಥಿಕ ನೆರವು ಮಕ್ಕಳ ವಿದ್ಯಾಭ್ಯಾಸ ಕುರಿತು ತಾಯಿ ತಂದೆಯರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದರು.
ಸಾಮಾನ್ಯವಾಗಿ 12 ರಿಂದ 24 ವರ್ಷ ವಯಸ್ಸಿನ ಮಕ್ಕಳು ದುಶ್ಚಟಗಳಿಗೆ ಬಲಿಯಾಗುವುದು ಹೆಚ್ಚಾಗಿರುತ್ತದೆ ಕಾರಣ ಆಕರ್ಷಣೆ ಪೋಷಕರು ಈ ಸಮಯದಲ್ಲಿ ಮಕ್ಕಳನ್ನು ಕುರಿತು ಎಚ್ಚರಿಕೆ ವಹಿಸಬೇಕಿದೆ. ಮಕ್ಕಳ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಈ ವಯಸ್ಸು ಅತ್ಯಂತ ಸಹಕಾರಿಯಾಗಿದೆ ಎಂದರು.
ಮಕ್ಕಳಿಗೆ ಬೇಕಾದ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯಾನ್ನಾಗಿ ಮಾಡಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡಿ ಎಂದು ಪೋಷಕರಿಗೆ ಮನವಿ ಮಾಡಿದರು.
ಪ್ರಸ್ತಾವಿಕ ಮಾಹಿತಿಯನ್ನು ಹಂಚಿಕೊಂಡ ಯೋಜನಾಧಿಕಾರಿ ಸುಧಾ ಭಾಸ್ಕರ್ ರವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಗೌರವ ಸಲ್ಲಿಸಿದರು.
ಫಲಾನುಭವಿ ತಾಂತ್ರಿಕ ವಿದ್ಯಾರ್ಥಿ ಭಾಗ್ಯಮ್ಮ ಮಾತನಾಡಿ ಈ ಯೋಜನೆಯಿಂದ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದು . ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಈ ಯೋಜನೆ ಆಸರೆಯಾಗಿದೆ. ನಮಗೆ ಇಂದು ನೀಡಿರುವ ಶಿಷ್ಯ ವೇತನದ ಸದ್ಭಾಳಕೆ ಮಾಡಿಕೊಳ್ಳುವ ಮೂಲಕ ಯೋಜನೆಗೆ ಗೌರವ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭಾ ಸದಸ್ಯ ತಾ.ನಾ.ಪ್ರಭುದೇವ್ ಮಾತನಾಡಿ ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುವುದು ಸಾಮಾನ್ಯದ ವಿಷಯವಲ್ಲ. ಈ ರೀತಿ ವಿಶೇಷ ಚಿಂತನೆ ಮಾಡಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಶುಭವಾಗಲಿ.
ಆರ್ಥಿಕ ಸಮಸ್ಯೆಗಳಿಂದ ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಕಡಿತಗೊಳಿಸಿ, ಕಾರ್ಖಾನೆಗಳಿಗೆ ದುಡಿಯಲು ಹೋಗುತ್ತಾರೆ ಆದರೆ ಇಂತಹ ಸಹಾಯ ದೊರೆತಲ್ಲಿ ಮಕ್ಕಳು ಮತ್ತಷ್ಟು ವಿದ್ಯಾಭ್ಯಾಸ ಮಾಡಲು ಸಹಕರಿಯಾಗುತ್ತದೆ. ಸಾವಿರಾರು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ತಮ್ಮ ಯೋಜನೆ ಮುಖೇನ ಸಹಾಯ ಸಲ್ಲಿಸುತ್ತಿರುವ ಡಾ.ವೀರೇಂದ್ರ ಹೆಗ್ಗಡೆ ಅವರ ಚಿಂತನೆ ಹಾಗೂ ಸಂಘದ ಪರಿವಾರಕ್ಕೆ ಶುಭವಾಗಲಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಾಯಿದಾ ಅನ್ನಿಸ್ ಮುಜಾವರ ಮಾತನಾಡಿ ಇದೊಂದು ಉತ್ತಮ NGO ಸಂಸ್ಥೆಯಾಗಿದ್ದು. ಇದೊಂದು ಉತ್ತಮ ಬೆಳವಣಿಗೆಯಾಗಿದೆ ವಿದ್ಯಾಭ್ಯಾಸ ಮಾಡಲು ಬಯಸುವ ಸಾವಿರಾರು ವಿದ್ಯಾರ್ಥಿಗಳಿಗೆ ಈ ಯೋಜನೆ ಆಸರೆಯಾಗಿದೆ. ಮುಂದೆ ಮತ್ತಷ್ಟು ವಿದ್ಯಾರ್ಥಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಸಹಾಯ ಸಹಕಾರ ದೊರೆಯುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ವಕೀಲರಾದ ನಾಗರಾಜನ್,ಪೊಲೀಸ್ ಇನ್ಸ್ಪೆಕ್ಟರ್ ಪಂಕಜ ಸಂಘದ ಮೇಲ್ವಿಚಾರಕರು,ಕಛೇರಿ ಸಿಬ್ಬಂದಿಗಳು ಹಾಜರಿದ್ದರು. ವಿದ್ಯಾರ್ಥಿಗಳು, ಮತ್ತು ಪೋಷಕರು ಹಾಜರಿದ್ದರು.