ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾಗರಿಕತೆ ಎಷ್ಟೇ ಮುಂದುವರಿದಿದ್ದರೂ ಬಹಿಷ್ಕಾರದಂತಹ ಅನಿಷ್ಟ ಪದ್ಧತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರಿನಲ್ಲೇ ಇನ್ನೂ ಜಾರಿಯಲ್ಲಿದೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.
ಸಿದ್ದರಾಮಯ್ಯ ಅವರ ತವರೂರು ಸಿದ್ದರಾಮನಹುಂಡಿಯ ಶ್ರೀನಿವಾಸಪುರದಲ್ಲಿ ದಲಿತ ಕುಟುಂಬವೊಂದಕ್ಕೆ ಸಾಮೂಹಿಕ ಬಹಿಷ್ಕಾರ ಹಾಕಿ ಅಮಾನವೀಯತೆ ತೋರಲಾಗಿದೆ ಎಂದು ಜೆಡಿಎಸ್ ಕಿಡಿಕಾರಿದೆ.
ವರುಣಾ ಕ್ಷೇತ್ರದ ಶಾಸಕರೂ ಆಗಿರುವ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪುತ್ರ ವಿಧಾನ ಪರಿಷತ್‌ಸದಸ್ಯ ಡಾ.ಯತೀಂದ್ರ ಅವರ ಗಮನಕ್ಕೂ ತಂದಿದ್ದರು, ನೊಂದ ಸುರೇಶ್‌ಅವರ ಕುಟುಂಬಕ್ಕೆ ಇಲ್ಲಿಯವರೆಗೂ ನ್ಯಾಯ ಸಿಕ್ಕಿಲ್ಲ.
ಸಾಮೂಹಿಕ ಬಹಿಷ್ಕಾರದ ಅನಿಷ್ಠ ಪದ್ಧತಿಯ ಬೇಗೆಯಲ್ಲಿ ಬೇಯುತ್ತಿರುವ ಅಮಾಯಕರಿಗೆ ಸಿದ್ದರಾಮಯ್ಯ ಮತ್ತು ಅವರ ಪುತ್ರ ನ್ಯಾಯ ದೊರಕಿಸಿ ಕೊಡದಿರುವುದು ನಾಚಿಕೆಗೇಡು ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ. ಮೈಸೂರು ಜಿಲ್ಲಾಧಿಕಾರಿ, ತಹಶೀಲ್ದಾರ್‌ಹಾಗೂ ಪೊಲೀಸರಿಗೆ ದೂರು ನೀಡಿದ್ದರೂ ಆ ನೊಂದ ಕುಟುಂಬಕ್ಕೆ ನ್ಯಾಯ ಎನ್ನುವುದು ಮರೀಚಿಕೆಯಾಗೇ ಉಳಿದಿದೆ.
ಈ ಪ್ರಕರಣದಲ್ಲಿ ಬಹಿಷ್ಕಾರದ ಶಿಕ್ಷೆಯಿಂದ ನಲುಗಿರುವ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳು ಮತ್ತು ವ್ಯಕ್ತಿಗಳ ಮೇಲೆ ಸರ್ಕಾರ ಈ ಕೂಡಲೇ ಸೂಕ್ತ ಕ್ರಮ ಜರುಗಿಸಬೇಕೆಂದು ಜೆಡಿಎಸ್ ಆಗ್ರಹ ಮಾಡಿದೆ.