ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಸರ್ಕಾರ ಕುಂಚಿಟಿಗ ಜಾತಿಗೆ ಒಬಿಸಿ ಮೀಸಲು ನೀಡಲ್ಲ, ರಾಜ್ಯ ಸರ್ಕಾರ ಕುಂಚಿಟಿಗ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಸಂಪುಟಕ್ಕೆ ತಂದು ಸಾಮಾಜಿಕ ನ್ಯಾಯ ನೀಡದಿರುವುದು ಕುಂಚಿಟಿಗ ಸಮಾಜಕ್ಕೆ ಮಾಡುತ್ತಿರುವ ಮಹಾದ್ರೋಹದ ಕೆಲಸವಾಗಿದೆ ಎಂದು ರಾಜ್ಯ ಕುಂಚಿಟಿಗ ಅಧಿಕಾರಿಗಳು ಮತ್ತು ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್.ಕೆ.ಲಕ್ಷ್ಮಣ್ ವಿಷಾದ ವ್ಯಕ್ತಪಡಿಸಿದರು.
ಬೆಂಗಳೂರಿನ ಆರ್.ಎಂ.ವಿ 2ನೇ ಹಂತದ ರಾಜ್ ಮಹಲ್ ಬಡಾವಣೆಯಲ್ಲಿರುವ ರಾಜ್ಯ ಕುಂಚಿಟಿಗ ಅಧಿಕಾರಿಗಳು ಮತ್ತು ನೌಕರರ ಸಂಘದ ಕಚೇರಿಯಲ್ಲಿ ಮಾಹಿತಿ ಆಯೋಗದ ಆಯುಕ್ತೆ ಡಾ.ಬಿ.ಆರ್ ಮಮತಾ ಹಾಗೂ ಬಿಬಿಎಂಪಿ ಡೆಪ್ಯೂಟಿ ಕಮಿಷನರ್ ಜೆ.ರಾಜು ಬೇತೂರು ಪಾಳ್ಯ ಇವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೇಂದ್ರದ ಒಬಿಸಿ ಮೀಸಲಾತಿ ನೆನೆಗುದಿಗೆ ಬಿದ್ದಿದೆ. ಇನ್ನೂ ರಾಜ್ಯ ಸರ್ಕಾರವು ಕುಂಚಿಟಿಗ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಯಥಾವತ್ ಜಾರಿ ತಂದಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಕುಂಚಿಟಿಗ ಜಾತಿಯನ್ನು ಬಳಸಿಕೊಂಡು ನಂತರ ಸಂಪೂರ್ಣ ಕಡೆಗಣಿಸಲಾಗುತ್ತದೆ. ಇದರಿಂದಾಗಿ ಹಿಂದುಳಿದ ಕುಂಚಿಟಿಗ ಜಾತಿಗೆ ಶಿಕ್ಷಣ, ಉದ್ಯೋಗದಲ್ಲಿ ಭಾರೀ ಅನ್ಯಾಯವಾಗುತ್ತಿದೆ ಎಂದು ಲಕ್ಷ್ಮಣ್ ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಸಂವಿಧಾನಕ ಹುದ್ದೆಗಳಲ್ಲಿ ಕುಂಚಿಟಿಗ ಪಾಲು ಶೂನ್ಯವಾಗಿದೆ. ಯಾವುದೇ ಆಯೋಗ ಸೇರಿದಂತೆ ವಿವಿಧ ನಿಗಮ, ಮಂಡಳಿ, ಅಕಾಡೆಮಿಗಳಲ್ಲಿ ಕುಂಚಿಟಿಗರಿಗೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಅಲ್ಲದೆ ಸಮಾಜದಲ್ಲಿರುವ ಏಕೈಕ ಶಾಸಕ ಟಿ.ಬಿ ಜಯಚಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ಮಾನ ನೀಡದಿರುವುದು ಕುಂಚಿಟಿಗರಿಗೆ ಮಾಡಿರುವ ದ್ರೋಹದ ಕೆಲಸ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಿಶ್ರಾಂತ ಐಎಎಸ್ ಅಧಿಕಾರಿ ಹಾಗೂ ಮಾಹಿತಿ ಆಯೋಗದ ಆಯುಕ್ತರಾದ ಡಾ.ಬಿ.ಆರ್.ಮಮತ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಸಮಾಜದ ಮುಖ್ಯವಾಹಿನಿಯಲ್ಲಿರುವ ಮುಖಂಡರು, ಕುಂಚಿಟಿಗ ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಹೊಂದಲು ಜಾಗೃತಿ ಮೂಡಿಸುವ ಅಗತ್ಯವಿದೆ. ಶಿಕ್ಷಣದಿಂದ ಮಾತ್ರ ಸಮಬಾಳು ಸಮಪಾಲು ಪಡೆಯಲು ಸಾಧ್ಯ ಎನ್ನುವ ಸತ್ಯ ಅರಿತು ಶೈಕ್ಷಣಿಕವಾಗಿ ಸಮಾಜ ಮುಖ್ಯವಾಹಿನಿಗೆ ಬರಬೇಕಿದೆ ಎಂದು ಅವರು ತಿಳಿಸಿದರು.
ಮಾಹಿತಿ ಆಯೋಗದ ಆಯುಕ್ತರನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಮತ್ತಿತರರಿಗೆ ಧನ್ಯವಾದಗಳನ್ನ ಅರ್ಪಿಸಿದ ಮಮತ ಅವರು, ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಕರೆ ನೀಡಿದರು.
ಕೆಂಪೇಗೌಡ ದಂತ ವೈದ್ಯಕೀಯ ಸಂಘದ ಅಧ್ಯಕ್ಷರು ಹಾಗೂ ಬಿಬಿಎಂಪಿ ಡೆಪ್ಯೂಟಿ ಕಮಿಷನರ್ ಜೆ.ರಾಜು ಬೇತೂರು ಪಾಳ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ ಕುಂಚಿಟಿಗ ಒಕ್ಕಲಿಗ ಸಮಾಜದಲ್ಲಿ ಯುವಕ-ಯುವತಿಯರಲ್ಲಿ ಸಾಕಷ್ಟು ಗ್ಯಾಪ್ ಏರ್ಪಟ್ಟಿದೆ. ಸಮಾಜದ ಹೆಣ್ಣು ಮಕ್ಕಳು ಶ್ರಮವಹಿಸಿ ಶೈಕ್ಷಣಿಕವಾಗಿ ಸಾಧನೆ ಮಾಡುತ್ತಿದ್ದರೆ, ಯುವಕರು ಕಲಿಕೆಯಿಂದ ಹೊರಗುಳಿಯುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಸಮಾಜದ ಯುವಕರು ಸತತ ಪರಿಶ್ರಮದ ಮೂಲಕ ಶಿಕ್ಷಣ ಪಡೆಯಬೇಕು ಎಂದು ಸೂಚ್ಯವಾಗಿ ತಿಳಿಸಿದರು.
ಅಖಿಲ ಕುಂಚಿಟಿಗ ಮಹಾಮಂಡಲದ ಮಾಜಿ ರಾಜ್ಯಾಧ್ಯಕ್ಷ ಕೆ.ಬಸವಾನಂದ, ರಾಜ್ಯ ಕುಂಚಿಟಿಗ ಅಧಿಕಾರಿಗಳು ಮತ್ತು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಎಂ.ಜಿ.ಗೋವಿಂದಯ್ಯ, ಉಪಾಧ್ಯಕ್ಷ ರಾಮಾಂಜಿನಪ್ಪ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ವಿಜಯಕುಮಾರ್, ರಮೇಶ್, ಮಹಾಲಿಂಗಪ್ಪ, ರಮೇಶ್ ಸೇರಿದಂತೆ ಮತ್ತಿತರ ಪದಾಧಿಕಾರಿಗಳು, ಸಮಾಜದ ಮುಖಂಡರು ಹಾಜರಿದ್ದರು.