ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಆಯುರ್ವೇದ ಕ್ಲಿನಿಕ್ಗಳಿಗೆ ಗುರುವಾರ ಜಿಲ್ಲಾ ಆಯುಷ್ ಅಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಂಡಳಿ ಕೆ.ಪಿ.ಎಂ.ಇ.ಎ ಸದಸ್ಯ ಡಾ.ಚಂದ್ರಕಾಂತ್ ನಾಗಸಮುದ್ರ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಆಸ್ಪತ್ರೆಗಳು ಆರೋಗ್ಯ ನೀಡುವ ತಾಣಗಳಾದ ಕಾರಣ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆಸ್ಪತ್ರೆಯ ತ್ಯಾಜ್ಯವು ಸೋಂಕು ಹರಡುವಲ್ಲಿ ಸಹಕಾರಿಯಾಗಬಹುದು. ಆದ ಕಾರಣ ನಿಗದಿತ ಸಂಸ್ಥೆಗಳಿಗೇ ತ್ಯಾಜ್ಯ ವಿಲೇವಾರಿ ಮಾಡಬೇಕು.
ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿಶ್ರಾಂತಿ ಸ್ಥಳ ಇತ್ಯಾದಿ ಸ್ಥಳಾವಕಾಶವಿರಬೇಕು. ಲಭ್ಯ ಸೇವೆಗಳಿಗೆ ದರಪಟ್ಟಿ ಪ್ರದರ್ಶಿಸುವುದು ಕಡ್ಡಾಯ ಹಾಗೂ ಕ್ಲಿನಿಕ್ಗಳಿಗೆ ಪರಿಸರ ಮಂಡಳಿಯ ಅನುಮೋದನೆ ಪಡೆದಿರಬೇಕು ಎಂದು ಸೂಚಿಸಿದರು.
ಕೆ.ಪಿ.ಎಂ.ಇ.ಎ ಕಾಯ್ದೆಯ ಅನುಸಾರ ಈ ಮೇಲ್ಕಂಡ ಎಲ್ಲಾ ನಿಯಮಗಳನ್ನು ಈಗಾಗಲೇ ಚಾಲ್ತಿಯಲ್ಲಿರುವ ಹಾಗೀಊ ಹೊಸದಾಗಿ ಆರಂಭಿಸುವ ಎಲ್ಲಾ ಆಯುಷ್ ಕ್ಲಿನಿಕ್ಗಳು ಪಾಲಿಸಬೇಕಾಗುತ್ತದೆ.
ವೈದ್ಯಕೀಯ ಸೇವೆ ನೀಡುವ ಎಲ್ಲ ಕ್ಲಿನಿಕ್, ಆಸ್ಪತ್ರೆ ಇತ್ಯಾದಿ ಸಂಸ್ಥೆಗಳು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುವ ನಿಯಂತ್ರಣಾ ಪ್ರಾಧಿಕಾರವಾದ ಕೆ.ಪಿ.ಎಂ.ಇ.ಎ ಮಂಡಳಿಯಲ್ಲಿ ನೋಂದಾಯಿಸುವುದು ಹಾಗೂ ಕಾಲಕಾಲಕ್ಕೆ ನವೀಕರಿಸುವುದು ಕಡ್ಡಾಯವಾದೆ. ತಪ್ಪಿದಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.