ಚಂದ್ರವಳ್ಳಿ ನ್ಯೂಸ್, ಬೆಂಗಳೂರು ಗ್ರಾಮಾಂತರ :
ಮುಂಗಾರು ಹಂಗಾಮಿನಲ್ಲಿ ರಾಗಿ ಬೆಳೆಯು 69,230 ಹೆಕ್ಟೇರ್ ಪ್ರದೇಶದಲ್ಲಿ ಆವರಿಸಿದ್ದು, ಬಹುತೇಕ ರಾಗಿ ಬೆಳೆಯು ತೆನೆ ತುಂಬುವ ಹಾಗೂ ಕಟಾವು ಹಂತದಲ್ಲಿರುತ್ತದೆ.
ಜಿಲ್ಲೆಯ ಬಹುತೇಕ ರೈತರು ರಾಗಿ ಬೆಳೆಯನ್ನು ಕಟಾವು ಯಂತ್ರಗಳ (combined harvesters) ಮೂಲಕ ಕಟಾವು ಕೈಗೊಳ್ಳುತ್ತಿದ್ದು, ಖಾಸಗಿ ರಾಗಿ ಕಟಾವು ಯಂತ್ರಗಳ ಮಾಲಿಕರು ರೈತರಿಂದ ಪ್ರತಿ ಗಂಟೆಗೆ 3500 ರೂಗಳಿಂದ 4000 ರೂಗಳ ವರೆಗೆ ಬಾಡಿಗೆ ಹಣ ಪಡೆಯುತ್ತಿರುವ ಬಗ್ಗೆ ಜಿಲ್ಲೆಯ ರೈತರುಗಳಿಂದ ದೂರು ಬಂದಿರುತ್ತದೆ.
ಇದರಿಂದ ರೈತರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗಲಿದೆ. ಪ್ರಸ್ತುತ ಇಂಧನ ವೆಚ್ಚ ಹಾಗೂ ಕಾರ್ಮಿಕರ ಕೂಲಿ ವೆಚ್ಚ ಹೆಚ್ಚಾಗಿದ್ದು, ಇತರೇ ನಿರ್ವಹಣೆ ವೆಚ್ಚಗಳನ್ನು ಪರಿಗಣಿಸಿ ರಾಗಿ ಕಟಾವು ಮಾಡಲು ಯಂತ್ರಕ್ಕೆ ಕಳೆದ ವರ್ಷ ನಿರ್ಧರಿಸಿದಂತೆ,
ಪ್ರತಿ ಗಂಟೆಗೆ ನ್ಯೂ ಹಾಲೆಂಡ್/ ಜಾನ್ಡೀರ್ ಕಂಪನಿಯ ದೊಡ್ಡ ಕಟಾವು ಯಂತ್ರಕ್ಕೆ ಗಂಟೆಗೆ 3350 ರೂಗಳು ಹಾಗೂ ಕ್ಲಾಸ್ ಮತ್ತು ಎಸಿಸಿ ಕಂಪನಿಯ ಕಟಾವು ಯಂತ್ರಕ್ಕೆ ಗಂಟೆಗೆ 2700 ರೂಗಳು ಮೀರದಂತೆ ಬಾಡಿಗೆಯನ್ನು ನಿಗದಿಪಡಿಸಿದೆ.
ತಪ್ಪಿದ್ದಲ್ಲಿ ರಾಗಿ ಕಟಾವು ಯಂತ್ರದ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ 2005ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.