ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರದೇಶದಲ್ಲಿ ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ತಮ್ಮ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಗುರುತಿಸಿ, ಜಮೀನು ಮಂಜೂರಾತಿಗಾಗಿ ವಾರದೊಳಗೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಚಳ್ಳಕೆರೆ ತಾಲ್ಲೂಕು ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆ, ಸ್ಮಶಾನ, ಅಂಗನವಾಡಿ, ಶಾಲೆಗಳಿಗೆ ಜಮೀನು ಮಂಜೂರಾತಿ ಕುರಿತಂತೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿವೇಶನ ರಹಿತ ಫಲಾನುಭವಿಗಳಿಗೆ ಅಗತ್ಯವಿರುವ ನಿವೇಶನ ಹಂಚಿಕೆ ಜೊತೆಗೆ ಸ್ಮಶಾನ, ಅಂಗನವಾಡಿ ಹಾಗೂ ಶಾಲೆಗಳಿಗೂ ಸಹ ಜಮೀನು ಮೀಸಲಿರಿಸಿ ಪ್ರಸ್ತಾವನೆ ಸಲ್ಲಿಸಬೇಕು. ಒಂದು ವೇಳೆ ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಜಮೀನು ಖರೀದಿಗೆ ಸಂಬಂಧಪಟ್ಟ ತಹಶೀಲ್ದಾರ್ ಹಾಗೂ ತಾ.ಪಂ ಇಒ ಗೆ ಗ್ರಾಮವಾರು ಪ್ರಸ್ತಾವನೆ ಸಲ್ಲಿಸಬೇಕು. ಗ್ರಾಮಸಭೆ ಮೂಲಕ ಅರ್ಹ ನಿವೇಶನ ರಹಿತ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ನಿವೇಶನ ರಹಿತ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ನಿವೇಶನ ರಹಿತರ ಫಲಾನುಭವಿಗಳಿಗೆ ಅನುಗುಣವಾಗಿ ಸರ್ಕಾರಿ ಜಮೀನು ಲಭ್ಯವಿದ್ದಲ್ಲಿ ತಹಶೀಲ್ದಾರ್ ಅವರು ಜಮೀನು ಮಂಜೂರಾತಿ ಆದೇಶ ಪ್ರತಿ, ಸ್ಕೆಚ್ ಹಾಗೂ ಪಹಣಿಯನ್ನು ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಗತ್ಯ ದಾಖಲೆಗಳೊಂದಿಗೆ ರಾಜೀವ್ ಗಾಂಧಿ ವಸತಿ ಯೋಜನೆಯ ಪೋರ್ಟ್ಲ್ನಲ್ಲಿ ಎಂಟ್ರಿ ಮಾಡಿ, ಹಕ್ಕುಪತ್ರ ವಿತರಣೆಗೆ ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸರ್ಕಾರಿ ಜಮೀನು ಒತ್ತುವರಿ ತಡೆಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾಲಕಾಲಕ್ಕೆ ಒತ್ತುವರಿ ತೆರವು ಸಮಿತಿ ಸಭೆಗಳನ್ನು ನಡೆಸಬೇಕು. ಒಂದು ವೇಳೆ ಸರ್ಕಾರಿ ಜಮೀನು ಒತ್ತುವರಿಯಾಗಿದ್ದರೆ ತಕ್ಷಣವೇ ಒತ್ತುವರಿ ತೆರವುಗೊಳಿಸಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ಚಳ್ಳಕೆರೆ ತಹಶೀಲ್ದಾರ್ ರೆಹಾನ್ ಪಾಷಾ, ಚಿತ್ರದುರ್ಗ ತಹಶೀಲ್ದಾರ್ ಗೋವಿಂದರಾಜು, ಚಿತ್ರದುರ್ಗ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವೈ. ರವಿಕುಮರ್, ಸೇರಿದಂತೆ ಕಂದಾಯ ನಿರೀಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.