ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಾಲ ಕಾರ್ಮಿಕರ ಪತ್ತೆಗೆ ಜಿಲ್ಲೆಯಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ದಾಳಿ ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಜಿಲ್ಲಾ ಮಟ್ಟದ ಕಾರ್ಯಪಡೆ ಮತ್ತು ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಲ ಹಾಗೂ ಕಿಶೋರ ಕಾರ್ಮಿಕ ಪದ್ದತಿ ನಿರ್ಮೂಲನೆ ಸಂಬಂಧ ತಾಲ್ಲೂಕು ಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಿ ಕಾರ್ಮಿಕ ಇಲಾಖೆ ಅಧಿಕಾರಿಗಳು ತಾ.ಪಂ. ಇಓ, ಬಿಇಓ, ಸಿಡಿಪಿಓ ಹಾಗೂ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ಕೈಗೊಳ್ಳಬೇಕು. ಗಣಿ, ಕಲ್ಲು ಕ್ವಾರಿ, ಪೌಲ್ಟ್ರೀಫಾರಂ, ಇಟ್ಟಿಗೆಭಟ್ಟಿ, ಹೋಟೆಲ್, ಗ್ಯಾರೇಜುಗಳಲ್ಲಿ ಹಠಾತ್ ದಾಳಿ ನಡೆಸಿ ತಪಾಸಣೆ ಕೈಗೊಳ್ಳಬೇಕು.
ಶಾಲೆಯಿಂದ ಹೊರಗುಳಿದ ಮಕ್ಕಳು ಬಾಲಕಾರ್ಮಿಕರಾಗಿ ಕೆಲಸ ಮಾಡುವ ಸಂಭವ ಹೆಚ್ಚು ಇರುತ್ತದೆ. ಇವರನ್ನು ರಕ್ಷಿಸಿ ಪುರ್ನವಸತಿ ಕಲ್ಪಿಸಬೇಕು, ಜೊತೆಗೆ ಶಿಕ್ಷಣದ ಮುಖ್ಯ ವಾಹಿನಿಗೆ ತರುವ ಕೆಲಸ ಆಗಬೇಕು. ಗಣಿ, ಕಲ್ಲು ಕ್ವಾರಿ ಕೆಲಸದಲ್ಲಿ ಬಾಲ ಕಾರ್ಮಿಕರು ಕಂಡು ಬಂದರೆ ಸಂಬಂದಪಟ್ಟ ಗಣಿಗಾರಿಕೆ ಲೈಸೈನ್ಸ್ ರದ್ದು ಮಾಡಿ, ಪ್ರಕರಣ ದಾಖಲಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶನ ನೀಡಿದರು.
ಬಾಲ ಕಾರ್ಮಿಕ ನಿಷೇಧ ಕಾಯ್ದೆ ಕುರಿತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮಗಳನ್ನು ನಡೆಸಬೇಕು. ಬೀದಿ ನಾಟಕಗಳ ಪ್ರದರ್ಶನದ ವೇಳೆ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ. ಗ್ರಾಮ ಪಂಚಾಯಿತಿಗಳಲ್ಲಿ ಬಾಲ ಕಾರ್ಮಿಕ ನಿಷೇಧ ಕಾಯ್ದೆಯ ಸೂಚನಾ ಫಲಕಗಳನ್ನು ಅಳವಡಿಸುವಂತೆ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ಹೇಳಿದರು.
ಜಿಲ್ಲಾ ಕಾರ್ಮಿಕಾಧಿಕಾರಿ ಅನಿಲ್ ಬಾಲಚಂದ್ರ ಭಗತಿ ಮಾತನಾಡಿ, 2024-25 ಸಾಲಿನಲ್ಲಿ ಒಟ್ಟು 1045 ಬಾಲ ಕಾರ್ಮಿಕ ಪತ್ತೆ ಕಾರ್ಯಾಚರಣೆ ದಾಳಿಗಳನ್ನು ನಡೆಸಲಾಗಿದೆ. 6 ಮಕ್ಕಳನ್ನು ರಕ್ಷಿಸಿ ಪುರ್ನವಸತಿ ಕಲ್ಪಿಸಲಾಗಿದೆ, ನಾಲ್ವರು ಮಾಲೀಕರ ವಿರುದ್ಧ ಮೊಕದ್ದಮೆ ಹೂಡಲಾಗಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಬೈಲಾ ತಿದ್ದುಪಿಡಿ ಮಾಡಿ, ಸಂಚಿತ ನಿಧಿ ಬ್ಯಾಂಕ್ ಖಾತೆಯ ಹೆಸರನ್ನು ಬದಲಿಸುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು.
ವಿವಿಧೋದ್ದೇಶ ಸಹಕಾರಿ ಸಂಘ ಸ್ಥಾಪನೆ:
ವಿವಿಧ ಇಲಾಖೆಗಳಿಗೆ ಹೊರ ಗುತ್ತಿಗೆ ಕಾರ್ಮಿಕರ ಸೇವೆ ಒದಗಿಸಲು ಬೀದರ್ ಜಿಲ್ಲಾ ಮಾದರಿಯಂತೆ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದೋದ್ದೇಶ ಸಹಕಾರಿ ಸಂಘ ಸ್ಥಾಪನೆ ಮಾಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಹೊರಗುತ್ತಿಗೆ ಕಾರ್ಮಿಕರನ್ನು ಒದಗಿಸುವ ಕಂಪನಿಗಳು ಇಎಸ್‍ಐ, ಪಿ.ಎಫ್. ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡುವುದಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ.
ಇದರ ಬದಲಾಗಿ ಕಾರ್ಮಿಕ ಇಲಾಖೆಯ ವಿವಿದೋದ್ದೇಶ ಸಹಕಾರಿ ಸಂಘ ಸ್ಥಾಪಿಸಿ, ಈ ಸೊಸೈಟಿಯಿಂದ ಮಾನವ ಸಂಪನ್ಮೂಲವನ್ನು ವಿವಿಧ ಇಲಾಖೆಗಳಿಗೆ ಒದಗಿಸಬಹುದು. ಜಿಲ್ಲೆಯಲ್ಲಿ ಸುಮಾರು 800 ಹೆಚ್ಚು ಹೊರಗುತ್ತಿಗೆ ನೌಕರರು ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದ ಸೂಚನೆಯಂತೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭ್ಯರ್ಥಿಗಳಿಗೆ ಹೊರಗುತ್ತಿಗೆ ಕೆಲಸದಲ್ಲಿ ಮೀಸಲಾತಿ ನೀಡಲು ಕೂಡ ಈ ಸೊಸೈಟಿಯಿಂದ ಸಹಾಯವಾಗಲಿದೆ, ಇದರ ಜೊತೆಗೆ ನೌಕರರಿಗೆ ಕಾಲಕಾಲಕ್ಕೆ ವೇತನ ಮತ್ತಿತರ ಸೌಲಭ್ಯ ಸಮರ್ಪಕವಾಗಿ ದೊರಕುತ್ತಿಲ್ಲ ಎಂಬ ದೂರುಗಳಿಗೂ ಕೂಡ ಕಡಿವಾಣ ಹಾಕಬಹುದಾಗಿದೆ ಎಂದರು.
ಈಗಾಗಲೇ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ನೌಕರರ ಸಂಬಳದ ಖಾತೆಯನ್ನು ಡಿಸಿಸಿ ಬ್ಯಾಂಕ್‍ಗಳಲ್ಲಿ ತೆರೆಯಲಾಗುವುದು. ಸಾಲ ಸೌಲಭ್ಯ ಒದಗಿಸಲು ಸಂಘದ ಸದಸ್ಯರ ನೊಂದಣಿ ಪ್ರಕ್ರಿಯೆಯನ್ನು ಸಹ ಆರಂಭಿಸಲಾಗಿದೆ ಎಂದು ಜಿಲ್ಲಾ ಕಾರ್ಮಿಕಾಧಿಕಾರಿ ಅನಿಲ್ ಬಾಲಚಂದ್ರ ಭಗತಿ ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಜಿ.ಪಿ.ರೇಣುಪ್ರಾದ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಮಹೇಶ್ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ, ಮಹಿಳಾ ಮತ್ತು ಮಕ್ಕಳ ಅಧಿಕಾರಿ ಪವಿತ್ರಾ, ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಪಿ.ಸತೀಶ್ ಕುಮಾರ್ ಸೇರಿದಂತೆ ಕಾರ್ಮಿಕ ನಿರೀಕ್ಷಕರು ಉಪಸ್ಥಿತರಿದ್ದರು.