ಅಕ್ರಮ ಕಲ್ಲು ಗಣಿಗಾರಿಕೆ: ದ್ರೋಣ್ ಸರ್ವೆಗೆ ಸೂಚನೆ-ಜಿಲ್ಲಾಧಿಕಾರಿ ವೆಂಕಟೇಶ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಮೀನು ಸಮತಟ್ಟುಗೊಳಿಸಿ ಕೃಷಿಯೋಗ್ಯ ಭೂಮಿಯನ್ನಾಗಿಸಲು, ಜಮೀನಿನಲ್ಲಿರುವ ಹೆಚ್ಚುವರಿ ಉಪ ಖನಿಜಗಳನ್ನು ತೆರವುಗೊಳಿಸಿ ಸಾಗಾಣಿಕೆ ಮಾಡಲು, ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ1994 ನಿಯಮ3 ಅಡಿ ನೀಡಿದ ಅನುಮತಿಯನ್ನು ಉಲ್ಲಂಘಿಸಿ, ಅಕ್ರಮವಾಗಿ ಗಣಿಕಾರಿಕೆ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಗಣಿಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿಯಮ3 ಅಡಿಯಲ್ಲಿ ಅನುಮತಿ ನೀಡುವಾಗ, ಜಮೀನು ಮಾಲಿಕರಿಗೆ ಷರತ್ತು ನಿಯಮಗಳನ್ನು ವಿಧಿಸಲಾಗಿರುತ್ತದೆ. ಆದರೆ ಕೆಲವು ಭಾಗದಲ್ಲಿ ನಿಯಮ ಉಲ್ಲಂಘಿಸಿ ಜಮೀನುಗಳಿಂದ ಹೆಚ್ಚುವರಿಯಾಗಿ ಉಪ ಖನಿಜಗಳನ್ನು ಗಣಿಗಾರಿಕೆ ಮಾಡಲಾಗಿದೆ. ಇದರಿಂದ ಕೃಷಿ ಭೂಮಿ ಹಾಳಾಗುವುದರ ಜೊತೆಗೆ ಪರಿಸರಕ್ಕೆ ಮಾರಕವಾಗುತ್ತದೆ.

ಜೊತೆಗೆ ಸರ್ಕಾರದ ರಾಜಸ್ವ ಸಂಗ್ರಹಣೆಗೂ ಧಕ್ಕೆ ಉಂಟಾಗುತ್ತದೆ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಂಡುಬಂದರೆ, ಸಂಬಂಧಪಟ್ಟ ತಹಶೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಂದ ವರದಿ ಪಡೆದು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಅಕ್ರಮ ಕಲ್ಲು ಗಣಿಗಾರಿಕೆ ದೂರು : ದ್ರೋಣ್ ಸರ್ವೆಗೆ ಸೂಚನೆ
ಜಿಲ್ಲೆಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿದ ಬಗ್ಗೆ ಕೇಳಿಬಂದ ದೂರುಗಳನ್ನು ಪರಿಶೀಲಿಸಲು, ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚನೆ ಮಾಡಲಾಗಿದೆ. ದೂರುದಾರ ಸಮ್ಮುಖದಲ್ಲೇ ಕಲ್ಲು ಕ್ವಾರಿಗಳ ದ್ರೋಣ್ ಸರ್ವೆ ನಡೆಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.

ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಿದ ಅವಧಿಯಲ್ಲಿ, ಎಷ್ಟು ವಿಸ್ತೀರ್ಣ ಪ್ರದೇಶಕ್ಕೆ ಅನುಮತಿ ನೀಡಲಾಗಿತ್ತು. ಎಷ್ಟು ಪ್ರಮಾಣದ ಕಲ್ಲು ಗಣಿಗಾರಿಕೆ ನಡೆಸಲಾಗಿದೆ.  ರಾಷ್ಟ್ರೀಯ ಹೆದ್ದಾರಿ 150 ನಿರ್ಮಾಣಕ್ಕೆ ಎಷ್ಟು ಪ್ರಮಾಣದ ಕಲ್ಲನ್ನು ಪುಡಿ ಮಾಡಿ ಉಪಯೋಗಿಸಲಾಗಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕು. ಎಲ್ಲಾ ಅಂಶಗಳು ಒಂದಕ್ಕೊಂದು ತಾಳೆಯಾಗಬೇಕು. ಒಂದು ವೇಳೆ ಹೆಚ್ಚುವರಿ ಗಣಿಗಾರಿಕೆ ನಡೆದಿರುವುದು ಕಂಡುಬಂದರೆ, ಅಂತಹವರ ವಿರುದ್ದ ಗಣಿ ನಿಯಮಾನುಸಾರ ದೂರು ದಾಖಲಿಸುವಂತೆ ಜಿಲ್ಲಾಧಿಕಾರಿ ಹೇಳಿದರು.

ಅಕ್ರಮ ಗಣಿಗಾರಿಕೆ, ಅದಿರು ಹಾಗೂ ಖನಿಜಗಳ ಸಾಗಾಣಿಕೆ ಬಗ್ಗೆ ಸಾರ್ವಜನಿಕರು ಸಲ್ಲಿಸಿದ ದೂರಗಳಿಗೆ ಅಧಿಕಾರಿಗಳು ಕಾಲಮಿತಿಯಲ್ಲಿ ಸೂಕ್ತ ಉತ್ತರ ಅಥವಾ ಹಿಂಬರಹವನ್ನು ನೀಡಬೇಕು. ದೂರಗಳ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.

      ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಮಹೇಶ್ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";