ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯದ ಕಟ್ಟಡವನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.
ಇಲ್ಲಿನ ತರಾಸು ರಂಗಮಂದಿರದಲ್ಲಿ ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದಿಂದ ಮಂಗಳವಾರ ಆಯೋಜಿಸಿದ್ದ ವಕೀಲರ ದಿನಾಚರಣೆ ಹಾಗೂ ವಕೀಲರ ವೃತ್ತಿಯಲ್ಲಿ 50 ಮತ್ತು 25 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ವಕೀಲರುಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು 93 ಕೋಟಿ ರೂ.ಗಳನ್ನು 10 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
2021ರಿಂದ ಕಟ್ಟಡ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದೆ, ಶೌಚಾಲಯದ ಕೊರತೆ ಇದೆ ಎಂದು ಭಿನ್ನವತ್ತಳೆ ನೀಡಿದ್ದೀರಿ. ಸಂವಿಧಾನ ಕೈಯಲ್ಲಿಟ್ಟಿಕೊಂಡಿರುವ ವಕೀಲರು ಜನ ಸಾಮಾನ್ಯರಿಗೆ ಹಕ್ಕುಗಳನ್ನು ಕೊಡಿಸುವ ಸ್ಥಾನದಲ್ಲಿರುವವರು ಶೌಚಾಲಯ ವಕೀಲರಿಲ್ಲ, ಕಕ್ಷಿಗಾರರಿಗಿಲ್ಲ ಎಂದು ಮಾನವ ಹಕ್ಕುಗಳ ಸ್ವಷ್ಟ ಉಲ್ಲಂಘನೆಯಾಗಿದೆ ಎಂದೇ ನಾನು ಭಾವಿಸುತ್ತೇನೆಂದು ಪಾಟೀಲ್ ಹೇಳಿದರು.
ಶೌಚಾಲಯಕ್ಕಾಗಿ ವಕೀಲರೇ ಭಿನ್ನವತ್ತಳೆ ನೀಡಿದ್ದೀರಿ ಎಂದರೆ ನ್ಯಾಯ ಕೊಡಿಸಿ ಎಂದು ಜನ ಸಾಮಾನ್ಯರು ನಿಮ್ಮ ಬಳಿ ಏಕೆ ಬರಬೇಕು ಎಂದು ಸಚಿವರು ಚಾಟಿ ಬೀಸಿದರು.
ವಕೀಲರ ವೃತ್ತಿ ಎಂದರೆ ಅತ್ಯಂತ ಗೌರವದ ವೃತ್ತಿಯಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾಕಷ್ಟು ಮಂಚೂಣಿಯಲ್ಲಿ ಹೋರಾಟ ಮಾಡಿದ್ದು ಇದೇ ವಕೀಲರು ಎನ್ನುವುದು ಮುಖ್ಯ ಎಂದು ಪಾಟೀಲ್ ಹೇಳಿದರು.
ವಕೀಲರು ಶ್ಯಾಣೇ ತನ ಮಾಡಬೇಕಿದೆ. ಕೋರ್ಟ್ ಕಟ್ಟಡಕ್ಕೆ ಅನುದಾನ ಕೊಡಿಸಲು ಸಿಎಂ ಬಳಿಗೆ ನಿಯೋಗ ಹೋಗಿ ಒತ್ತಡ ಹಾಕೋಣ ಎಂದು ಕಿವಿ ಮಾತು ಹೇಳಿದರು.
ರಾಜ್ಯದಲ್ಲಿ ಸುಮಾರು 25 ಲಕ್ಷ ಪ್ರಕರಣಗಳು ಬಾಕಿ ಇವೆ. ಅದರಲ್ಲಿ ಹೈಕೋರ್ಟ್ ಒಂದರಲ್ಲೇ 2.50 ಲಕ್ಷ ಪ್ರಕರಣ ಬಾಕಿ ಇವೆ. ಇಳಿದ 22 ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ಜಿಲ್ಲಾ, ತಾಲೂಕು ಮಟ್ಟದ ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿ ಇರುವುದು ಬೇಸರದ ಸಂಗತಿಯಾಗಿದೆ. ಇದರಲ್ಲಿ 10 ವರ್ಷದ ಮೇಲ್ಪಟ್ಟ ಪ್ರಕರಣಗಳೇ 1 ಲಕ್ಷ ಇವೆ. ಸಾವಿರಾರು ಪ್ರಕರಣಗಳು 10 ವರ್ಷ, 20 ವರ್ಷ ಬಾಕಿ ಇದ್ದರೆ ಈ ವ್ಯವಸ್ಥೆ ಬಗ್ಗೆ ಜನ ಏನು ಅಂದುಕೊಳ್ಳಬೇಕು ಎಂದು ನೋವು ತೋಡಿಕೊಂಡರು.
ಯಾವ ರೀತಿಯಾದ ನ್ಯಾಯದಾನದ ವ್ಯವಸ್ಥೆ ಇದೆ. ಸುಪ್ರೀಂ ಕೋರ್ಟ್ ನಿಂದ ಕೆಳ ಹಂತದ ಕೋರ್ಟ್ ತನಕ 25, 50 ವರ್ಷಗಳಷ್ಟು ಹಳೆಯದಾದ ಪ್ರಕರಣಗಳು ಬಾಕಿ ಇರುವುದು ಬೇಸರ ಸಂಗತಿಯಾಗಿದೆ. ತುಟ್ಟಿ ವಕೀಲರನ್ನು ನೇಮಕ ಮಾಡಿಕೊಂಡು ಕೇಸ್ ದಾಖಲು ಮಾಡಿಕೊಂಡರೆ ಬೇಗ ತೀರ್ಪು ಬರಲಿವೆ. ಸಾಮಾನ್ಯ ವಕೀಲರ ನೇಮಕ ಮಾಡಿಕೊಂಡಲ್ಲಿ ತೀರ್ಪು ವಿಳಂಬ ಆಗಲಿವೆ. ಸಣ್ಣ ರೈತರು, ಬಡವರ ಪ್ರಕರಣಗಳನ್ನು 6 ತಿಂಗಳೊಳಗೆ ಪೂರ್ಣಗೊಲಿಸಬೇಕೆಂದು ಕಾಯ್ದು ರೂಪಿಸಿದ್ದೇವೆ.ಹಾಗಾಗಿ ವಕೀಲರು ಬೇಗ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಸಂವಿಧಾನವನ್ನು ದುರುಪಯೋಗ ಮಾಡಿಕೊಳ್ಳುವ ಜನರಿಗೆ ಬುದ್ದಿ ಕಲಿಸಲು ವಕೀಲರು, ಸಂವಿಧಾನ ಸೈನಿಕರಂತೆ ಕೆಲಸ ಮಾಡಬೇಕು. ದೇಶದೊಳಗಿನ ಯಾವುದೇ ಸಮಸ್ಯೆಗೆ ಮವಿಧಾನವೇ ಅತ್ಯತ್ತಮ ಪರಿಹಾರ. ಹಾಗಾಗಿ ವಕೀಲ ವೃತ್ತಿಯಲ್ಲಿರುವವರು ಸಂವಿಧಾನದ ಸೈನಿಕರಾಗಬೇಕು ಎಂದು ಕರೆ ನೀಡಿದರು. ಇಂದು ಸಂವಿಧಾನವನ್ನು ಅಪಹಾಸ್ಯ, ನಿರ್ಲಕ್ಷ, ಹಾಗೂ ದುರುಪಯೋಗ ಮಾಡುವವರನ್ನು ನೋಡುತ್ತಿದ್ದೇವೆ. ಅಂಥವರಿಗೆ ಸರಿಯಾದ ಬುದ್ಧಿ ಕಲಿಸುವುದು ಅಂದ್ರೆ ಸಂವಿಧಾನದ ಸಮರ್ಪಕ ಅನುಷ್ಠಾನ. ಹಾಗಾಗಿ ವಕೀಲರು ಯಾವಾಗಲೂ ಸಂವಿಧಾನದ ಸೈಕಿಕರಂತೆ ಹೋರಾಟ ಮಾಡಿದಾಗ ಮಾತ್ರ ದೇಶ ಬಹಳ ಎತ್ತರಕ್ಕೆ ಬೆಳೆಯುತ್ತೆ ಎಂದು ತಿಳಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೋಣ್ ವಾಸುದೇವ್ ವಕೀಲರು ಯಾಕೆ ಏಕೆ ಭಿನ್ನವತ್ತಳೆ ನೀಡಬೇಕು, ವಕೀಲರು ಹೋರಾಟಗಾರರಲ್ಲವೇ, ಕೇಸ್ ಹಾಕಿ ಪರಿಹಾರ ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದಕ್ಕೆ ನ್ಯಾಯಾಧೀಶರು ವಕೀಲರಿಗೆ ಕಿವಿ ಮಾತು ಹೇಳುತ್ತಲೇ ಪ್ರತಿಯೊಂದು ಪ್ರಕರಣವನ್ನು ಕೋರ್ಟ್ ನಲ್ಲಿ ಕೇಸ್ ಹಾಕಿ ಹೋರಾಟ ಮಾಡಿ ಪರಿಹಾರ ಪಡೆಯಬೇಕಿದ್ದರೆ ಸರ್ಕಾರ ಏಕೆ ಇರಬೇಕು, ಸರ್ಕಾರ ಇರೋದು ಪ್ರಕರಣಗಳನ್ನು ಹೆಚ್ಚಿಸಲು ಅಲ್ಲ ಎಂದು ತೀಕ್ಷ್ಣವಾಗಿ ಸರ್ಕಾರಕ್ಕೆ ನ್ಯಾಯಾಧೀಶರು ಚಾಟಿ ಬೀಸಿದರು.
ಸುಪ್ರೀಂ ಕೋರ್ಟ್ ಈಗಾಗಲೇ ಹೇಳಿದೆ ಪ್ರತಿ ಒಂದು ಮಿಲಿಯನ್ ಜನಸಂಖ್ಯೆಗೆ 50 ಜನ ನ್ಯಾಯಾಧೀಶರು ಇರಬೇಕು, ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದ ನ್ಯಾಯಾಧೀಶರು, ನಮ್ಮಲ್ಲಿ 1 ಮಿಲಿಯನ್ ಜನಸಂಖ್ಯೆಗೆ ಕೇವಲ 14 ಮಂದಿ ನ್ಯಾಯಾಧೀಶರು ಇದ್ದಾರೆ. ಕಳೆದ 24 ವರ್ಷಗಳಲ್ಲಿ ನ್ಯಾಯಾಲಯಗಳ ಸಂಖ್ಯೆ, ನ್ಯಾಯಾಧೀಶರ ಸಂಖ್ಯೆ ಹೆಚ್ಚಳವಾಗಿಲ್ಲ, ಹೀಗಿದ್ದರೆ ವ್ಯವಸ್ಥೆ ಸರಿ ಹೋಗುವುದು ಹೇಗೆ ಎಂದು ನ್ಯಾಯಾಧೀಶರು ಪ್ರಶ್ನಿಸಿದರು.
ಪ್ರಕರಣಗಳ ಇತ್ಯರ್ಥ ಮಾಡುವುದು ವಿಳಂಬ ಆಗುತ್ತಿದೆ. ಕಾರಣ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಕಕ್ಷಿಗಾರರಿಗೆ ಶೌಚಾಲಯ ಇಲ್ಲದೆ ಎಂದರೆ ಅದು ಜಾಗದ ಕೊರತೆ ಎಂದರ್ಥ. ವಕೀಲರ ಭಿನ್ನವತ್ತಳೆಯಲ್ಲ ಅದು ಕಕ್ಷಿಗಾರರ ಭಿನ್ನವತ್ತಳೆಯಾಗಿ ಮಾರ್ಪಡಿಸಬೇಕು ಎಂದು ಹೇಳಿದರು.
ಹಂತ ಹಂತವಾಗಿ ಕೋರ್ಟ್ ನಿರ್ಮಾಣಕ್ಕೆ ಹಣ ನೀಡಲಿ. ಒಮ್ಮೆಗೆ 93 ಕೋಟಿ ನೀಡುವುದು ಬೇಡ, ಸಚಿವರು ನೀಡಿರುವ ಭರವಸೆಯಂತೆ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಬೇಕು. ಕೋರ್ಟ್ 10 ಎಕರೆ ಜಾಗ ಒತ್ತುವರಿಯಾಗದಂತೆ ಕೂಡಲೇ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಬೇಕು ಎಂದು ಹೇಳಿದರು. ಹಿರಿಯ ವಕೀಲ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಹೆಚ್.ಕಾಂತರಾಜ್ ಮಾತನಾಡಿದರು.
50 ವರ್ಷ ಸಾರ್ಥಕ ಸೇವೆ ಸಲ್ಲಿಸಿದ ಎನ್ ಜಿ ಕೃಷ್ಣಮೂರ್ತಿ-
ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದಲ್ಲಿ ಸತತ 50 ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿದ್ದು ಇಡೀ ನ್ಯಾಯಾಲಯದಲ್ಲಿ ಎನ್.ಜಿ.ಕೃಷ್ಣಮೂರ್ತಿ ಒಬ್ಬರೇ ಆಗಿದ್ದಾರೆ. ಸರಳ, ಸಜ್ಜನಿಕೆಯ, ಪರಿಶ್ರಮದಿಂದ ಕರ್ತವ್ಯ ಮಾಡಿರುವ ಅವರು ಕಕ್ಷಿಗಾರರಿಗೆ ನ್ಯಾಯ ಒದಗಿಸಿದ್ದಾರೆ. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ, ಸರ್ಕಾರಿ ವಕೀಲರಾಗಿಯೂ ಸೇವೆ ಸಲ್ಲಿಸುವ ಮೂಲಕ ನ್ಯಾಯಾಲಯಕ್ಕೆ ಘನತೆ ತಂದುಕೊಟ್ಟಿದ್ದಾರೆಂದು ಅವರನ್ನು ಸನ್ಮಾನಿಸಲಾಯಿತು.
ಇವರ ನಂತರ 25 ವರ್ಷಗಳ ಸೇವೆ ಸಲ್ಲಿಸಿದ ಹಲವು ವಕೀಲರುಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸುವರು. ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಸಿಇಒ ಸೋಮಶೇಖರ್ ಜಿಲ್ಲಾ ನ್ಯಾಯಾಧೀಶರುಗಳಾದ ಶಂಕರಪ್ಪ ನಿಂಬಣ್ಣ ಕಲ್ಕಣಿ, ಗಂಗಾಧರ ಸಿ.ಎಚ್, ಮಮತಾ ಡಿ, ಉಪಾಧ್ಯಕ್ಷ ಬಿ.ಎಂ.ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ.