ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
೬೯ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಗಡಿ ತೇಕಲವಟ್ಟಿ ಗ್ರಾಮದ ಪ್ರತಿಭೆ, ಎಂ. ಕೃಷ್ಣಮೂರ್ತಿ ಎಂದಿದ್ದರೂ ಪ್ರಚಲಿತ ಹೆಸರು ಕಿಟ್ಟಿ ಎಂದು.
ಈ ಯುವ ಪ್ರತಿಭೆ ತನ್ನ ಪ್ರತಿಭಾನ್ವಿತ ಕೌಶಲ್ಯದ ಮುಖಾಂತರ ಮುದ್ರಣ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕಾರಣ ಚಿತ್ರದುರ್ಗದ ಜಿಲ್ಲಾ ಆಡಳಿತ ಅವರನ್ನು ಇಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಅವರ ಗಣನೀಯ ಸಾಧನೆ ಪರಿಗಣಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಸಾಧನೆಗೆ ಸಂದ ಗೌರವ ಎನ್ನಬೇಕಿದೆ. ಕಾರಣ ತೆರೆಮರೆಯಲ್ಲಿದ್ದುಕೊಂಡು ತನ್ನ ಕಾಣದ ಕೈಗಳಿಂದ ಪರೋಕ್ಷವಾಗಿ ಸಮಾಜದ ಕೆಲಸ ಮಾಡುತ್ತಿರುವವರನ್ನ ಗುರುತಿಸಿ ಪ್ರೋತ್ಸಾಹಿಸುವುದು ನಾಗರಿಕ ಸಮಾಜದ ಕರ್ತವ್ಯ.
ಕೃಷ್ಣಮೂರ್ತಿ ಡಿಪ್ಲೋಮಾ ಪದವೀಧರ. ಅಧ್ಯಯನದಲ್ಲಿ ಅಷ್ಟೇನು ಆಸಕ್ತಿ ಇರದ ಅವರಿಗೆ ಓದು ಒಕ್ಕಾಲು ಬುದ್ಧಿ ಮುಕ್ಕಾಲು…ಎನ್ನುವ ಹಾಗೆ ಇವರು ಕಲಿತದ್ದು ಕಡಿಮೆಯಾದರೂ ಕೌಶಲ್ಯಾಧಾರಿತ ಶಿಕ್ಷಣ ಮೈಗೂಡಿಸಿಕೊಂಡಿದ್ದಾರೆ.
ಆರಂಭಿಕ ಹಂತವಾಗಿ(೧೯೯೫)ರಲ್ಲಿ ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದ ಮುದ್ರಣಾಲಯದಲ್ಲಿ ಆಗಿನ್ನು ಮಳೆ ಜೋಡಿಸುವ (ಲೆಟರ್ ಪ್ರೆಸ್) ನಲ್ಲಿ ಮೊದಲು ಕೆಲಸ ಆರಂಭಿಸಿ, ನಂತರ ಬೆಂಗಳೂರಿನ ಪ್ರತಿಷ್ಠಿತ ಅಶೋಕ್ ಕುಮಾರ್ ಸಂಸ್ಥಾಪನೆಯ “ಲಕ್ಷ್ಮಿ ಮುದ್ರಣಾಲಯ”ದಲ್ಲಿ ಸಣ್ಣ ಕೆಲಸಕ್ಕೆ ಸೇರುತ್ತಾರೆ.
ಅಲ್ಲಿ ಮುದ್ರಣಾಲಯದ ಒಳ- ಹೊರಗನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾ.. ತರಬೇತಿ ಪಡೆಯುತ್ತಾರೆ. ಮುಂದೆ ಅವರು ೨೦೦೭ ರಲ್ಲಿ ತನ್ನದೇ ಆದ ಸ್ವಂತ “ಸ್ವಾನ್ ಮುದ್ರಣಾಲಯ” ಆರಂಭಿಸುತ್ತಾರೆ. ಮುದ್ರಣಾಲಯ ಮುಂದಿನ ದಿನಗಳಲ್ಲಿ ತನಗರಿವಿಲ್ಲದಂತೆ ಬರಹಗಾರನ್ನ, ಸಾಹಿತಿಗಳನ್ನ, ಪ್ರಕಾಶಕರನ್ನ ಹಾಗೆಯೇ ಸಂಘ ಸಂಸ್ಥೆಗಳವರನ್ನ ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಾ, ರಾಜ್ಯ ಸರ್ಕಾರದ, ಸಂಘ ಸಂಸ್ಥೆಗಳ, ವಿವಿಧ ಗಣ್ಯ ಮಾನ್ಯ ಮಠಗಳವರನ್ನ ಬರ ಸೆಳೆದು ಇದುವರೆಗೂ ಸುಮಾರು ಏಳು ಸಾವಿರಕ್ಕಿಂತಲೂ ಹೆಚ್ಚು ಅಂತರಾಷ್ಟ್ರೀಯ ಗುಣಮಟ್ಟದ ಕನ್ನಡ ಪುಸ್ತಕಗಳನ್ನು ಮುದ್ರಣ ಮಾಡಿ ಸಾರಸ್ವತ ಲೋಕಕ್ಕೆ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿರುವುದು ಯಾರಾದರೂ ಆಶ್ಚರ್ಯ ಪಡಬೇಕಾದ ಸಂಗತಿಯೇ ಆಗಿದೆ.
ಮುದ್ರಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಕೃಷ್ಣಮೂರ್ತಿ ಅವರಿಗೆ ಅವರು ಮಾಡುತ್ತಿರುವ ಕಾಯಕಕ್ಕೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಹಾಗೆ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಇವರ ಗುಣಮಟ್ಟದ ಹಾಗೂ ಜವಾಬ್ದಾರಿಯ ಕೆಲಸ ಪರಿಗಣಿಸಿ ಇವರ ಬಗ್ಗೆ ಲೇಖನಗಳು ಮತ್ತು ಸಂದರ್ಶನಗಳು ಪ್ರಕಟ ಹಾಗೂ ಪ್ರಸಾರವಾಗಿರುವುದು ಇದೆ.
ಇವರು ಗಳಿಸಿದ್ದರಲ್ಲಿ ಸಮಾಜದ ಸತ್ಕಾರ್ಯಗಳಿಗೆ ಕೊಡುವ ಔದಾರ್ಯವೂ ರೂಡಿಸಿಕೊಂಡಿರುವ ಇವರು ಮುದ್ರಣ ಕ್ಷೇತ್ರದಲ್ಲಿ ಆಗಬೇಕಾಗಿರುವ ಕೆಲಸಗಳ ಕಾರ್ಯಗಳ ಪ್ರಗತಿಯ ಬಗ್ಗೆ ಸಂಘ ಸಂಸ್ಥೆಗಳ ಮೂಲಕ ಹೋರಾಟ ರೂಪಿಸುವ, ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಛಾತಿಯೂ ಇವರಲ್ಲಿದೆ.
ಇದರೊಂದಿಗೆ ಪ್ರಾಚೀನ ಮತ್ತು ಹಳೆಯ ಸಾಮಾನುಗಳನ್ನು ಸಂಗ್ರಹಿಸುವ ಹವ್ಯಾಸ ರೂಡಿಸಿಕೊಂಡಿರುವ ಇವರು ತಮ್ಮ ಮುದ್ರಣಾಲಯದಲ್ಲಿ ಅಪರೂಪ ಎನ್ನುವ ವಸ್ತುಗಳನ್ನು ಸಂಗ್ರಹಿಸಿರುವುದು ನೋಡುಗರಿಗೆ ಕಿರು ವಸ್ತು ಸಂಗ್ರಹಾಲಯದಂತೆ ಗೋಚರಿಸುತ್ತದೆ.
ಕಳೆದ ಎರಡು ಮೂರು ದಶಕಗಳಿಂದ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮುದ್ರಣ ಕೆಲಸ ಪ್ರತಿಯೊಂದು ಸುಂದರವಾಗಿ ಹೊರ ಬರಲು ಕಾರಣಕರ್ತರಾಗಿದ್ದಾರೆ. ಇದನ್ನು ಮನಗಂಡ ಬೇರೆ ಮಠಗಳ ಗುರುಗಳೂ ಸಹ ಕಿಟ್ಟಿ ಅವರ ಮುದ್ರಣ ಲೋಕಕ್ಕೆ ಮುಖ ಮಾಡುತ್ತಿರುವುದು ಹೆಮ್ಮೆಯ ಸಂಗತಿ.
ತೀರ ಇತ್ತೀಚಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಚಿತ್ರದುರ್ಗದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಕೀರ್ತಿಯನ್ನು ಬಾನೆತ್ತರಕ್ಕೆ ಕೊಂಡೊಯ್ದ ಶ್ರೀಜಯದೇವ ಜಗದ್ಗುರುಗಳ ೧೫೦ನೇ ಜಯಂತ್ಯುತ್ಸವದ ಸವಿನೆನಪಿಗಾಗಿ ಸಾವಿರಾರು ಪುಟಗಳ ಬೃಹತ್ ಗ್ರಂಥ “ಜಯದೇವ ದಿಗ್ವಿಜಯ” ಹಾಗೂ ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಎಸ್ ಜೆ ಎಂ ವಿದ್ಯಾಪೀಠದ ಸಂಸ್ಥಾಪಕರಾದ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಜೀವನ ಸಾಧನೆ ಕುರಿತ “ಚಿನ್ಮುಲಾದ್ರಿ ಚಿತ್ಕಳೆ” ಬೃಹತ್ ಗ್ರಂಥವನ್ನು ಸುಂದರವಾಗಿ ಮುದ್ರಿಸಿಕೊಟ್ಟ ಕೀರ್ತಿಯು ಕಿಟ್ಟಿ ಮತ್ತು ಅವರ ಬಳಗಕ್ಕೆ ಸಲ್ಲುತ್ತದೆ.
ಇವರು ಮುಂದಿನ ದಿನಗಳಲ್ಲಿ ತಮ್ಮ ಕಾರ್ಯಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯ ಮೂಲಕ ರಾಜ್ಯ, ರಾಷ್ಟ್ರಮಟ್ಟದ ಹಾಗೆಯೇ ಅಂತರಾಷ್ಟ್ರಮಟ್ಟದ ಪ್ರಶಸ್ತಿ ಪಡೆದುಕೊಳ್ಳಲಿ ಎಂದು ಆಶಿಸೋಣ.