ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಾರ್ಚ್ 27 ಮತ್ತು 28ರಂದು ನಡೆಯಲಿರುವ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಕಾಲೇಜು ಉಪನ್ಯಾಸಕರು ಹಾಗೂ ಶಿಕ್ಷಕರಿಗೆ ಅನ್ಯಕಾರ್ಯ (ಒಒಡಿ) ನಿಮಿತ್ತ ಸೌಲಭ್ಯ ಒದಗಿಸಿರುವುದಾಗಿ ಜಿಲ್ಲಾ ಕಸಾಪ ಪ್ರಕಟಣೆಯಲ್ಲಿ ತಿಳಿಸಿದೆ.
ಆದರೆ ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಪಿಯು ಕಾಲೇಜುಗಳ ಪರೀಕ್ಷೆ ಮುಗಿದು ಉಪನ್ಯಾಸಕರಿಗೆ ಮಾ.22ರಿಂದ ಮೌಲ್ಯ ಮಾಪನ ಕಾರ್ಯ ಆರಂಭವಾಗಲಿದೆ. ಜೊತೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಮಾರ್ಚ್ 21 ರಿಂದ ಏಪ್ರಿಲ್ 4ರ ವೇಳೆಗೆ ನಡೆಯಲಿವೆ.
ಈ ಮಧ್ಯೆ ರಂಜಾನ್ ಹಾಗೂ ಯುಗಾದಿ ಹಬ್ಬಗಳು ಮಾರ್ಚ್ 30 ಮತ್ತು 31ರಂದು ನಡೆಯಲಿವೆ. ಇನ್ನು ಪ್ರಾಥಮಿಕ ಶಾಲಾ ಶಿಕ್ಷಕರು ಕೂಡ ವಾರ್ಷಿಕ ಶಾಲಾ ಪರೀಕ್ಷೆ ಹಾಗೂ ಬಿಸಿಯೂಟದಲ್ಲಿ ನಿರತರಾಗಿರುತ್ತಾರೆ. ಬಹುತೇಕ ಸಾಹಿತ್ಯಾಸಕ್ತರು ಕೂಡ ಮಕ್ಕಳ ಪರೀಕ್ಷೆ ಮತ್ತು ಹಬ್ಬಗಳ ಆಚರಣೆಯತ್ತ ಗಮನ ಹರಿಸಿರುತ್ತಾರೆ. ಇಷ್ಟೇ ಅಲ್ಲದೆ ಈ ಬಾರಿ ಅವಧಿಗೂ ಮುನ್ನವೇ ರಣ ಬಿಸಿಲು ಜನರನ್ನು ಕಾಡಲಾರಂಭಿಸಿದೆ. ಪರಿಸ್ಥಿತಿ ಹೀಗಿರುವಾಗ ಜಿಲ್ಲಾ ಕಸಾಪ ಒಒಡಿ ಸೌಲಭ್ಯ ನೀಡುವುದಾದರೂ ಯಾರಿಗೆ? ದಿನಾಂಕ ನಿಗದಿ ಮಾಡುವ ಮುನ್ನ ಸಂಘಟಕರು ಕ್ಯಾಲೆಂಡರ್ ನತ್ತ ಒಮ್ಮೆ ಯೋಚಿಸಬೇಕಿತ್ತಲ್ಲವೆ? ಎಂ.ಜಿ. ರಂಗಸ್ವಾಮಿ ಹಿರಿಯೂರು, ನಿವೃತ್ತ ಪ್ರಾಂಶುಪಾಲರು.