ಚಂದ್ರವಳ್ಳಿ ನ್ಯೂಸ್, ಬಾಗೇಪಲ್ಲಿ:
ಜನಪ್ರತಿನಿಧಿಯ ದೂರವಾಣಿ ಕರೆ ಸ್ವೀಕರಿಸದೆ ಕರ್ತವ್ಯ ಲೋಪ(ನಿರ್ಲಕ್ಷ್ಯತೆ) ಎಸಗಿದ ಜಿಲ್ಲಾ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿ ಬಿಂದುಮಣಿ ಎಂ.ಎಲ್. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಸುಬ್ಬಾರೆಡ್ಡಿ ಅವರು ಅಲ್ಪ ಸಂಖ್ಯಾತರ ಇಲಾಖೆಯ ಕಾರ್ಯಗಳ ಬಗ್ಗೆ ಮಾತನಾಡಲು ಬಿಂದುಮಣಿ ಎಂ.ಎಲ್ ಅವರಿಗೆ ದೂರವಾಣಿ ಕರೆ ಮಾಡಿದ್ದರು. ಆದರೆ ಅವರು ದೂರವಾಣಿ ಕರೆ ಸ್ವೀಕರಿಸಿಲ್ಲವೆಂದು ಅಮಾನತು ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಶಾಸಕರು ಸಂಬಂಧಿಸಿದ ಇಲಾಖೆ ಅಧಿಕಾರಿಗೆ ಸತತ ಮೂರು ದಿನಗಳ ಕಾಲ ಫೋನ್ ಕರೆ ಮಾಡಿದರೂ ಸಹ ಶಾಸಕರ ಕರೆಯನ್ನು ಅಧಿಕಾರಿ ಸ್ವೀಕರಿಸಲಿಲ್ಲ. ಕರೆ ಸ್ವೀಕರಿಸದೆ ಕರ್ತವ್ಯ ನಿರ್ಲಕ್ಷ್ಯತೆ ತೋರಿಸಿದ ಅಧಿಕಾರಿ ಬಿಂದುಮಣಿ ಎಂ. ಎಲ್. ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಶಾಸಕ ಸುಬ್ಬಾರೆಡ್ಡಿ ಅಲ್ಪಸಂಖ್ಯಾತರ ನಿರ್ದೇಶನಾಲಯ ನಿರ್ದೇಶಕರಿಗೆ ದೂರು ನೀಡಿದ್ದರು. ಹಾಗಾಗಿ ಆ ಅಧಿಕಾರಿಯನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಬಿಂದುಮಣಿ ಎಂ. ಎಲ್. ಅವರು ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು 2021ರ ನಿಯಮ 3 (1), (ii), (ill), ಗಳನ್ನು ಉಲ್ಲಂಘಿಸಿರುತ್ತಾರೆ. ಹೀಗಾಗಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) 1957 ಅಡಿಯಲ್ಲಿ ಬಿಂದುಮಣಿ ಎಂ.ಎಲ್. ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ.
ಇಲಾಖಾ ವಿಚಾರಣೆ ಕಾಯ್ದಿರಿಸಿ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 10(1)(ಡಿ) ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ರಾಜ್ಯಪಾಲರ ಆದೇಶ ಅನುಸಾರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಎಸ್. ಅಜಾಸ್ ಪಾಷಾ ಅವರು ಬಿಂದುಮಣಿ ಎಂ.ಎಲ್. ವಿರುದ್ಧ ಅಮಾನತು ಆದೇಶ ಹೊರಡಿಸಿದ್ದಾರೆ.

