ಏ.28ರಂದು ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ

News Desk

ಚಂದ್ರವಳ್ಳಿ ನ್ಯೂಸ್, ಬೆಂ.ಗ್ರಾ.ಜಿಲ್ಲೆ:
ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ
, ಉದ್ಘಾಟನೆ, ಸೌಲಭ್ಯ ವಿತರಣೆಗಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಏಪ್ರಿಲ್ 28 ರಂದು ಜಿಲ್ಲೆಗೆ ಆಗಮಿಸುತ್ತಿದ್ದು ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಸೂಚಿಸಿದರು.

ಈ ಸಂಬಂಧ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸರ್ಕಾರ ಅಧಿಕಾರಕ್ಕೆ ಬಂದು ಮುಂದಿನ ತಿಂಗಳಿಗೆ 2 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಎರಡು ವರ್ಷಗಳ ಸಾಧನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ನಿವೇಶನ ರಹಿತ ಅರ್ಹರನ್ನು ಗುರ್ತಿಸಲಾಗಿದ್ದು, ಫಲಾನುಭವಿಗಳಿಗೆ ಮುಖ್ಯಮಂತ್ರಿಗಳಿಂದ ಹಕ್ಕು ಪತ್ರ ವಿತರಿಸಲಾಗುವುದು. ಇದಕ್ಕಾಗಿ ಸಂಬಂಧಿಸಿದ ಆಯಾ ತಾಲ್ಲೂಕು ತಹಶೀಲ್ದಾರ್ ಗಳು, ಇಒ ಗಳು ಶೀಘ್ರ ಫಲಾನುಭವಿಗಳ ಅಂತಿಮ ಪಟ್ಟಿ ಸಿದ್ಧಪಡಿಸಿ ಎಂದರು. ಪೋಡಿ ದುರಸ್ತಿ ಜಮೀನುಗಳಿಗೆ ಹಕ್ಕು ಪತ್ರ ವಿತರಿಸುವುದು, ವಸತಿ ರಹಿತರಿಗೆ ವಸತಿ ಸೌಲಭ್ಯ ವಿತರಣೆ ಮಾಡಲಾಗುವುದು.

ಜಿಲ್ಲೆಯಲ್ಲಿ ಶಂಕುಸ್ಥಾಪನೆಗೆಉದ್ಘಾಟನೆಗೆ ಸಿದ್ಧವಿರುವ ಕಾಮಗಾರಿಗಳ ಪಟ್ಟಿಯನ್ನು ತಯಾರಿಸಿ, ವಿವಿಧ ಇಲಾಖೆಗಳು ಎರಡು ವರ್ಷಗಳಲ್ಲಿ ಮಾಡಿರುವಂತಹ ಆಯವ್ಯಯ, ಅಭಿವೃದ್ಧಿ ಕೆಲಸಗಳು, ಸೌಲಭ್ಯ ಪಡೆದ ಫಲಾನುಭವಿಗಳ ಮಾಹಿತಿ ನೀಡಿ ಜೊತೆಗೆ ಕಾರ್ಯಕ್ರಮದಲ್ಲಿ ವಿವಿಧ ಸೌಲಭ್ಯಗಳನ್ನು ವಿತರಿಸುವ ಸಲುವಾಗಿ ಸಂಬಂಧಪಟ್ಟ ಇಲಾಖೆಗಳು ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ವರದಿ ನೀಡಿ ಎಂದರು.

ಉದ್ಯೋಗ ಭಾಗ್ಯ-ಕಳೆದ ಸೆಪ್ಟೆಂಬರ್ನಲ್ಲಿ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ 10000 ಕ್ಕು ಅಧಿಕ ಅಭ್ಯರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ 2000 ಕ್ಕು ಅಧಿಕ ಅಭ್ಯರ್ಥಿಗಳು ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಹಲವು ಅಭ್ಯರ್ಥಿಗಳಿಗೆ ಉದ್ಯೋಗ ನೇಮಕಾತಿ ಪತ್ರ ವಿತರಿಸಲಾಗುವುದು.

ಈ ಸಂಬಂಧ ಕಂಪನಿಗಳ ಮುಖ್ಯಸ್ಥರ ಸಭೆ ನಡೆಸಿ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸಾಕಷ್ಟು ರೈತರು ಭೂಮಿ ಕಳೆದುಕೊಂಡಿದ್ದಾರೆ, ಅಂತಹ ಕುಟುಂಬಗಳಿಗೆ ಒಂದು ಉದ್ಯೋಗ ಸಿಗಬೇಕು ಎನ್ನುವುದು ನನ್ನ ಗುರಿ.  ಕುಟುಂಬಕ್ಕೆ ಒಂದು ಉದ್ಯೋಗ, ಸ್ಥಳಿಯರಿಗೆ ಮೊದಲ ಆದ್ಯತೆ ನೀಡಿ, ಅರ್ಹರಿಗೆ ಉದ್ಯೋಗ ಕಲ್ಪಿಸಿ ಎಂದು ಕಂಪನಿ ಮುಖ್ಯಸ್ಥರಿಗೆ ಹೇಳಿದರು.

ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪಿಸಿ ಕಂಪನಿಗಳಿಗೆ ಅವಶ್ಯಕತೆ ಇರುವಂತಹ ಕೌಶಲ್ಯ ತರಬೇತಿಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಹೆಚ್ಚಿನ ಕ್ರಮ ವಹಿಸಿ ಎಂದರು.

ಸಭೆಯಲ್ಲಿ ಹೊಸಕೋಟೆ ಶಾಸಕ ಶರತ್ ಕುಮಾರ್ ಬಚ್ಚೇಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ರಾಜಣ್ಣ, ಬಯಪ ಅಧ್ಯಕ್ಷ ಶಾಂತಕುಮಾರ್, ದೊಡ್ಡಬಳ್ಳಾಪುರ ಮಾಜಿ ಶಾಸಕ ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಸಿಇಒ ಡಾ.ಕೆ.ಎನ್ ಅನುರಾಧ, ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಶಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

 

 

Share This Article
error: Content is protected !!
";